ಚಿಕ್ಕಮಗಳೂರು: ರಸ್ತೆ ತಿರುವಿನಲ್ಲಿ ತಡೆ ಗೋಡೆಗಳಿಲ್ಲದ ಕಾರಣ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ರಸ್ತೆ ಬದಿಯ ಹಳ್ಳಕ್ಕೆ ಪಲ್ಟಿಯಾಗಿರುವ ಘಟನೆ ಮೂಡಿಗೆರೆ ತಾಲೂಕಿನ ಜಾವಳಿ ಸಮೀಪದ ಮೂಲೆಮನೆ ಎಂಬ ಗ್ರಾಮದಲ್ಲಿ ನಡೆದಿದೆ.
ಕಾರಿನಲ್ಲಿ ನಾಲ್ವರು ಬೆಂಗಳೂರಿನಿಂದ ಹೊರನಾಡು ಅನ್ನಪೂರ್ಣೇಶ್ವರಿ ದೇಗುಲಕ್ಕೆ ಹೋಗುತ್ತಿದ್ದರು. ಬೆಳಗಿನ ಜಾವ ನಾಲ್ಕು ಗಂಟೆಗೆ ಜಾವಳಿ ಸಮೀಪದ ಮೂಲೆಮನೆ ರಸ್ತೆ ತಿರುವಿನಲ್ಲಿ ಈ ದುರ್ಘಟನೆ ನಡೆದಿದೆ. ರಸ್ತೆ ಬದಿಯ ಹಳ್ಳಕ್ಕೆ ತಡೆಗೋಡೆಗಳಿಲ್ಲದೆ ಇರುವುದು ಈ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಕಾರು ಹಳ್ಳಕ್ಕೆ ಪಲ್ಟಿಯಾಗಿದ್ದು, ಕಾರಿನಲ್ಲಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಳಿಕ ಹಿಂದೆ ಸಂಚರಿಸುತ್ತಿದ್ದ ವಾಹನಗಳು ಹಾಗೂ ಸ್ಥಳೀಯರಿಂದ ಕಾರಿನಲ್ಲಿದ್ದವರನ್ನು ರಕ್ಷಿಸಲಾಗಿದೆ. ಈ ಮಾರ್ಗದಲ್ಲಿ ಪ್ರತಿನಿತ್ಯ ನೂರಾರು ಪ್ರವಾಸಿ ವಾಹನಗಳು ಓಡಾಡುತ್ತವೆ. ಈ ತಿರುವಿನಲ್ಲಿ ವಾರಕ್ಕೊಂದು ಅಪಘಾತಗಳು ನಡೆಯುತ್ತಿವೆ.
ಆದರೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳ ಗಮನಕ್ಕೆ ತಂದರೂ ಉಪಯೋಗವಿಲ್ಲದಂತಾಗಿದೆ ಎಂದು ಸ್ಥಳೀಯರು ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ. ಈಗ ಸಣ್ಣ-ಪುಟ್ಟ ಅಪಘಾತಗಳಾಗಿವೆ. ನಾಳೆ ದೊಡ್ಡ ಅನಾಹುತವಾದರೆ ಅದಕ್ಕೆ ಜವಾಬ್ದಾರಿ ಯಾರೆಂದು ಸ್ಥಳೀಯರು ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ.