ಚಿಕ್ಕಮಗಳೂರು: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲಲು ನಮ್ಮ ಪಕ್ಷದ ನಾಯಕರು ನಡೆಸಿದಂತಹ ಸ್ವಯಂಕೃತ ಅಪರಾಧಗಳು ಸಹ ಒಂದು ಕಾರಣ ಎಂದು ಕೇಂದ್ರದ ಮಾಜಿ ಸಚಿವೆ ಡಿ.ಕೆ ತಾರದೇವಿ ರಾಜ್ಯ ಕಾಂಗ್ರೆಸ್ ಮುಖಂಡರ ವಿರುದ್ಧ ಕೆಂಡಾ ಮಂಡಲವಾಗಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಏಕೆ ತೊಂದರೆ ಆಗಿದೆ. ಎಲ್ಲಿ ಸರಿ ಪಡಿಸಬೇಕು ಎಂಬ ಯೋಚನೆ ಬಿಟ್ಟು, ರಾಜ್ಯ ನಾಯಕರು ತಮ್ಮ ತಮ್ಮ ಹಿತಾಸಕ್ತಿ ಕಾಪಾಡಿಕೊಳ್ಳಲು ತಮ್ಮನ್ನು ಮೀಸಲಾಗಿ ಇಟ್ಟುಕೊಂಡು ತಮ್ಮ ಉದ್ದೇಶ ಈಡೇರಿಸಿಕೊಳ್ಳಲು ಈಡೀ ಕಾಂಗ್ರೆಸ್ ಪಕ್ಷವನ್ನು ಬಳಸಿಕೊಳ್ಳಲು ಪ್ರಾರಂಭ ಮಾಡಿದರು ಎಂದು ದೂರಿದರು.
ಕಾಂಗ್ರೆಸ್ ಪಕ್ಷ ಮತ್ತು ಮತದಾರರನ್ನು ಗ್ರಾಂಟ್ ಆಗಿ ಮಾಡಿಕೊಂಡು, ನಮ್ಮ ಜೊತೆ ಬಿದ್ದಿರುತ್ತಾರೆ ಎಂದು ಕೊಂಡಿದ್ದರು. ನಾವು ನಡೆದಿದ್ದೇ ಹಾದಿ ಎಂದು ತಿಳಿಸಿದಿದ್ದರು. ಅಲ್ಲದೇ ತಮ್ಮ ಬೆಂಬಲಿಗರಿಗೆ ಪ್ರೋತ್ಸಾಹ ಕೊಟ್ಟು ಗುಂಪುಗಾರಿಕೆಗೆ ಪ್ರಚೋದನೆ ಮಾಡಿದರು. ಪಕ್ಷಕ್ಕಾಗಿ, ಸಿದ್ಧಾಂತಕ್ಕಾಗಿ, ಜನರ ವಿಶ್ವಾಸಗಳಿಸಿಕೊಂಡವರನ್ನು ವ್ಯವಸ್ಥಿತವಾಗಿ ಮೂಲೆ ಗುಂಪು ಮಾಡಿದರು ಎಂದರು.
ಕಳೆದ ಒಂದು ವರ್ಷದ ಹಿಂದೆ ಸಮ್ಮಿಶ್ರ ಸರ್ಕಾರ ರಚನೆ ಆದ ಉದ್ದೇಶವೇ ಜಾತ್ಯಾತೀತ ಶಕ್ತಿ ಒಂದುಗೂಡಬೇಕು. ಮುಂದಿನ ಚುನಾವಣೆಯಲ್ಲಿ ಮೋದಿಗೆ ಸರಿಯಾದ ತಿರುಗೇಟು ನೀಡಬೇಕು ಎಂಬುದಾಗಿತ್ತು. ಆದರೆ ಆ ಯಾವುದೇ ಕೆಲಸ ಆಗಿಲ್ಲ. ಪಕ್ಷ ಕಟ್ಟುವಂತಹ ಕೆಲಸವೂ ಆಗಲಿಲ್ಲ. ಎಲ್ಲಿ ಯಾವ ತೊಂದರೆ ಇದೆ, ಜಿಲ್ಲೆಯಲ್ಲಿ ಯಾವ ಸಮಸ್ಯೆ ಇದೆ ಎಂಬುದರ ಬಗ್ಗೆ ಗಮನ ಹರಿಸಲಿಲ್ಲ ಎಂದರು.
ಒಳ್ಳೆಯ ಸರ್ಕಾರ ಕೊಡುವ ಬದಲು ಜಗಳ, ಅಧಿಕಾರದ ಹಂಚಿಕೆಯಲ್ಲಿ ಜಗಳ ಮಾಡಿಕೊಂಡರು ಇದರಿಂದ ಜನಕ್ಕೆ ಅಧಿಕಾರದ ಫಲ ಅನುಭವಿಸೋಕೆ ಇದ್ದಾರೆ ಎಂಬ ಭಾವನೆ ಬಂತು. ಇದರಿಂದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಭಾರಿ ಬೆಲೆ ತೆರಬೇಕಾಗಿ ಬಂದಿದೆ ಎಂದು ತಿಳಿಸಿದರು.
ರಾಹುಲ್ ಗಾಂಧಿ ಅವರು ರಾಜೀನಾಮೆ ಕೊಡುವುದು ಸಮಸ್ಯೆಗೆ ಪರಿಹಾರವಲ್ಲ. ಅವರು ಅಧ್ಯಕ್ಷರಾಗಿ ಮುಂದುವರೆಯಲಿ. ಕಾಂಗ್ರೆಸ್ ಪಕ್ಷ ಜನರ ನಂಬಿಕೆ ಕಳೆದುಕೊಂಡಿದೆ. ಆ ನಂಬಿಕೆ ಸಂಪಾದನೆ ಮಾಡಲು ಬೇಕಾದಂತಹ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಕರ್ನಾಟಕದಲ್ಲಿ ಹಳಿ ತಪ್ಪಿರುವ ಕಾಂಗ್ರೆಸ್ ಪಕ್ಷವನ್ನು ರಾಹುಲ್ ಮಧ್ಯಸ್ಥಿಕೆವಹಿಸಿ ಸರಿ ಮಾಡಬೇಕು. ಮುಕ್ತ ಮನಸ್ಸಿನಿಂದ ಎಲ್ಲರನ್ನೂ ಜೊತೆಗೆ ತೆಗೆದುಕೊಂಡು ಹೋಗಬೇಕು. ದಿಟ್ಟವಾದ ಕ್ರಮ ತೆಗೆದುಕೊಳ್ಳಬೇಕು. ಇದೇ ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಮತ್ತೆ ಕಾಂಗ್ರೆಸ್ಗೆ ಕೆಟ್ಟ ಕಾಲ ಬರುತ್ತೆ ಎಂದು ಭವಿಷ್ಯ ನುಡಿದರು.