ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಸುರಿದ ಮಹಾಮಳೆಯಿಂದಾಗಿ ನೂರಾರು ಜನರ ತೋಟ, ಮನೆ, ಮಳೆಯ ನೀರಿನಲ್ಲಿ ಕೊಚ್ಚಿ ಕೊಂಡು ಹೋಗಿತ್ತು.
ಸರ್ಕಾರದಿಂದ ಸರಿಯಾದ ಸಮಯಕ್ಕೆ ನೆರೆ ಪರಿಹಾರ ಬಂದಿಲ್ಲ ಎಂದು ಜಿಲ್ಲೆಯ ಇಬ್ಬರು ರೈತರು ಆತ್ಮಹತ್ಯೆಗೆ ಶರಣಾಗಿದ್ದರು. ಇಂದು ಮೃತ ರೈತರ ಮನೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಿ ಟಿ ರವಿ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ ಸರ್ಕಾರದ ವತಿಯಿಂದ 5 ಲಕ್ಷ ರೂ. ಚೆಕ್ ವಿತರಣೆ ಮಾಡಿದರು.
ಮೃತ ಚನ್ನಪ್ಪಗೌಡ ಹಾಗೂ ಚಂದ್ರೇಗೌಡ ಇಬ್ಬರೂ ಕುಟುಂಬಗಳಿಗೂ ಸಚಿವ ಸಿ ಟಿ ರವಿ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಧೈರ್ಯ ತುಂಬಿದರು. ನಂತರ ಮಾತನಾಡಿದ ಅವರು, ಅತಿವೃಷ್ಟಿಯಿಂದ ತೋಟ, ಜಮೀನು ಕಳೆದುಕೊಂಡ ಇಬ್ಬರೂ ಆತ್ಮಹತ್ಯೆಗೆ ಶರಣಾಗಿದ್ದು ಅವರ ಜೀವನ ವಾಪಸ್ ತಂದು ಕೊಡಲು ಸಾಧ್ಯವಿಲ್ಲ. ಮೃತರ ಕುಟುಂಬಗಳಿಗೆ 5 ಲಕ್ಷ ರೂಪಾಯಿ ಚೆಕ್ ನೀಡಿದ್ದೇವೆ. ನೊಂದವರ ನೆರವಿಗೆ ನಾವು ಸದಾ ಇರ್ತೀವಿ. ಸಣ್ಣ ಬೆಳೆಗಾರರಿಗೆ ಭೂಮಿ ಕಳೆದುಕೊಂಡವರಿಗೂ ವಿಶೇಷ ಪ್ಯಾಕೇಜ್ ನೀಡಲು ಮುಖ್ಯಮಂತ್ರಿಗಳ ಜೊತೆ ಮಾತನಾಡುತ್ತೇವೆ. ಮನೆ ಕಳೆದುಕೊಂಡವರಿಗೆ ಮನೆ ಕಟ್ಟಿಕೊಡುವ ಕೆಲಸ ಮಾಡುತ್ತೇವೆ ಎಂದರು.
ಕೆಲವು ಗ್ರಾಮ ಗ್ರಾಮಗಳೇ ಭೂ ಕುಸಿತದಿಂದ ಕಣ್ಮರೆಯಾಗಿವೆ. ಭೂಮಿಯ ರೆಕಾರ್ಡ್ ಕುರಿತು ಸರ್ವೇ ಮಾಡಲು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದು ಅರಣ್ಯದಲ್ಲಿ ಕೃಷಿ ಮಾಡಿದರೆ ನಾವು ಸಹಾಯ ಮಾಡಲು ಕಷ್ಟ. ಒಟ್ಟು ಅಂದಾಜು ಸಿಕ್ಕ ನಂತರ ಎಲ್ಲಾ ಸಮಸ್ಯೆ ಬಗೆಹರಿಸುತ್ತೇವೆ ಎಂದು ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಿ ಟಿ ರವಿ ಹೇಳಿದರು.