ಚಿಕ್ಕಮಗಳೂರು: ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ವತಿಯಿಂದ ನಗರದಲ್ಲಿ ಅದ್ಧೂರಿಯಾಗಿ ದತ್ತ ಜಯಂತಿ ಕಾರ್ಯಕ್ರಮ ನಡೆಯುತ್ತಿದೆ. ಮೊದಲ ದಿನವಾದ ಇಂದು ಬೋಳು ರಾಮೇಶ್ವರ ದೇವಸ್ಥಾನದ ಆವರಣದಲ್ಲಿ ಅನುಸೂಯ ಜಯಂತಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಹಾಗು ಮಾಜಿ ಸಚಿವ ಸಿ.ಟಿ.ರವಿ ಚಾಲನೆ ಕೊಟ್ಟರು.
ಬೋಳು ರಾಮೇಶ್ವರ ದೇವಸ್ಥಾನದಿಂದ ಕಾಮಧೇನು ಗಣಪತಿ ದೇವಸ್ಥಾನದವರೆಗೂ ಬೃಹತ್ ಮೆರವಣಿಗೆ ನಡೆಯಿತು. ಮಹಿಳೆಯರು ಜೈ ಶ್ರೀರಾಮ್ ಹಾಗೂ ಶ್ರೀ ದತ್ತಾತ್ರೇಯನ ಜಪ ಮಾಡಿದರು. ರಸ್ತೆಯುದ್ಧಕ್ಕೂ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.
ಸಿ.ಟಿ.ರವಿ ಮಾಧ್ಯಮಗಳೊಂದಿಗೆ ಮಾತನಾಡಿ, ಸಿದ್ದರಾಮಯ್ಯ ರಾಜಕೀಯ ಲಾಭಕ್ಕೆ ಸಮಾಜ ಕದಡುತ್ತಿದ್ದಾರೆ. ಶಾಲೆಯಲ್ಲಿ ಯೂನಿಫಾರ್ಮ್ ಇರಬೇಕೋ ಬೇಡವೋ ಎಂಬುದು ಚರ್ಚೆಯ ವಿಷಯವಾಗಬಾರದು. ಯೂನಿಫಾರ್ಮ್ ಅನ್ನು ಯಾವ ಉದ್ದೇಶಕ್ಕೆ ತಂದಿದ್ದಾರೆ ಎಂಬುದು ಅರ್ಥವಾಗಬೇಕು. ಮಕ್ಕಳಲ್ಲೂ ಜಾತಿ ಹಾಗೂ ಕೋಮು ವಿಷ ಬಿತ್ತುವ ಕೆಲಸ ಮಾಡಿದ್ದಾರೆ. ಇದು ತಪ್ಪು. ಇದು ರಾಷ್ಟ್ರಘಾತುಕ ಕೆಲಸ. ಮಹಮ್ಮದ್ ಅಲಿ ಜಿನ್ನಾ, ಕಾಂಗ್ರೆಸ್ ಮನಸ್ಥಿತಿ ಎರಡೂ ಒಂದೇ. ರಾಜಕೀಯ ಲಾಭಕ್ಕಾಗಿ, ಶಾಲಾ ಮಕ್ಕಳಲ್ಲಿ ಪ್ರತ್ಯೇಕ ಭಾವನೆ ಮೂಡಿಸುತ್ತಿದ್ದಾರೆ ಎಂದು ಹೇಳಿದರು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯಿಸಿ, ನೀವು ಅಧಿಕಾರಕ್ಕೆ ಬಂದಾಗಲೆಲ್ಲ ಅಲ್ಪಅಸಂಖ್ಯಾತರನ್ನು ಓಲೈಕೆ ಮಾಡುವುದನ್ನು ಬಿಡಿ. 2013ರಲ್ಲಿ ಅಧಿಕಾರಕ್ಕೆ ಬಂದಾಗ ಇಲ್ಲದ ಟಿಪ್ಪು ಜಯಂತಿ ಹುಟ್ಟು ಹಾಕಿದ್ದೀರಿ. ಶಾಲೆಗಳಲ್ಲಿ ಸಮವಸ್ತ್ರ ತೆಗೆಯುವುದಕ್ಕೆ ಹೊರಟಿದ್ದೀರಾ?. ಹಿಜಾಬ್ ಹಾಕೋಕೆ ಹೊರಟಿದ್ದೀರಾ. ಲೋಕಸಭೆ ಚುನಾವಣೆ ಹತ್ತಿರ ಬಂದಿರುವುದಕ್ಕೆ ಹಿಜಾಬ್ ಮುನ್ನೆಲೆಗೆ ತಂದಿದ್ದಾರೆ. ಸಿದ್ದರಾಮಯ್ಯನವರೇ ನಿಮ್ಮ ಮುಖವಾಡ 2018ರಲ್ಲಿ ಕಳಚಿ ಬಿದ್ದಿದೆ. ಅಭಿವೃದ್ಧಿ ಕೆಲಸ ಮಾಡದೇ ಹಿಂದೂ, ಮುಸ್ಲಿಮರು ಹೊಡೆದಾಡುವಂತೆ ಮಾಡಿದ್ದಾರೆ. ಇದನ್ನು ಬಿಟ್ಟು ಅಭಿವೃದ್ಧಿ ಕೆಲಸ ಮಾಡಿ ಎಂದರು.
ಯಾರು ಬೂಟು ನೆಕ್ಕೋರು, ಯಾರು ಬ್ರಿಟೀಷರ ಪರವಾಗಿದ್ದರು ಎಂಬುದು ದೇಶದ ಚರಿತ್ರೆಯಲ್ಲಿದೆ ಎಂದು ಬಿ.ಕೆ.ಹರಿಪ್ರಸಾದ್ ವಿರುದ್ಧ ವಾಗ್ದಾಳಿ ನಡೆಸಿದ ಶೋಭಾ, ಇದನ್ನು ಮತ್ತೆ ಕೆದಕೋಕೆ ಬರಬೇಡಿ ಹರಿಪ್ರಸಾದ್ ಅವರೇ. ಕೆದಕೋಕೆ ಬಂದರೆ ನಿಮ್ಮ ಮುಖಕ್ಕೆ ಮಸಿ ಬೀಳುತ್ತೆ. ಜನ ಅಭಿವೃದ್ಧಿ, ಶಾಂತಿ ಕೇಳುತ್ತಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ದತ್ತ ಜಯಂತಿ: ಶೋಭಾಯಾತ್ರೆಯಲ್ಲಿ ಕೇಂದ್ರ ಸಚಿವೆ ಕರಂದ್ಲಾಜೆ, ಸಿ.ಟಿ ರವಿ ಡ್ಯಾನ್ಸ್