ಚಿಕ್ಕಮಗಳೂರು: ಪ್ರತಿ ವರ್ಷದಂತೆ ಈ ಬಾರಿಯೂ ಚಿಕ್ಕಮಗಳೂರಿನ ದತ್ತಪೀಠದಲ್ಲಿ ಹಿಂದೂ ಪರ ಸಂಘಟನೆಗಳಾದ ವಿಶ್ವಹಿಂದೂ ಪರಿಷತ್ ಮತ್ತು ಭಜರಂಗ ದಳದ ವತಿಯಿಂದ ದತ್ತಮಾಲಾ ಅಭಿಯಾನ ಹಾಗೂ ದತ್ತ ಜಯಂತಿ ಉತ್ಸವವನ್ನು ಅದ್ಧೂರಿಯಾಗಿ ನಡೆಸಲಾಯಿತು. ಇತ್ತ ನಗರದಲ್ಲಿ ಮಹಿಳೆಯರು ಅನಸೂಯ ಜಯಂತಿ ಮತ್ತು ಸಂಕೀರ್ತನಾ ಯಾತ್ರೆಯನ್ನು ಹಮ್ಮಿಕೊಂಡಿದ್ದರು.
ಈ ಕಾರ್ಯಕ್ರಮದಲ್ಲಿ ನೂರಾರು ಮಹಿಳೆಯರು ನಗರದ ಭೋಳು ರಾಮೇಶ್ವರ ದೇವಾಲಯದಿಂದ ಐಜಿ ರಸ್ತೆಯ ಮೂಲಕ ಸಾಗಿ ಸಂಕೀರ್ತನಾ ಯಾತ್ರೆಯನ್ನು ಕಾಮಧೇನು ಗಣಪತಿ ದೇವಸ್ಥಾನದಲ್ಲಿ ಮುಕ್ತಾಯ ಮಾಡಿದರು. ಈ ಸಂಕೀರ್ತನಾ ಯಾತ್ರೆ ಮುಗಿದ ನಂತರ ಎಲ್ಲಾ ಮಹಿಳೆಯರು ವಾಹನದ ಮೂಲಕ ದತ್ತ ಪೀಠಕ್ಕೆ ತೆರಳಿದ್ದು, ಗುಹೆಯಲ್ಲಿರುವ ದತ್ತಾತ್ರೇಯನ ಪಾದುಕೆ ದರ್ಶನ ಪಡೆದರು. ನಂತರ ಅನಸೂಯ ಗದ್ದುಗೆಗೆ ಪೂಜೆಯನ್ನು ಸಲ್ಲಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ, ಈ ಕಾರ್ಯಕ್ರಮಕ್ಕೆ ಪ್ರಮುಖ ಮಾತೆಯರು, ಸನ್ಯಾಸಿನಿಯರು ಬಂದಿದ್ದಾರೆ. ಅವರ ನೇತೃತ್ವದಲ್ಲಿ ದತ್ತ ಜಯಂತಿ ಆಚರಣೆ ಮಾಡಲಾಗುತ್ತಿದೆ. ದತ್ತ ಪೀಠದ ಸಮಸ್ಯೆ ಬಗೆ ಹರಿಯಬೇಕು. ಈ ಸಮಸ್ಯೆ ಬೇಗ ಬಗೆಹರಿಯಲು ದತ್ತನಲ್ಲಿ ಬೇಡಿಕೊಳ್ಳಲಿದ್ದು, ಜೊತೆಗೆ ರಾಜ್ಯ ಸುಭಿಕ್ಷವಾಗಿರಬೇಕು ಹಾಗೂ ಕೊರೊನಾ ಬೇಗ ರಾಜ್ಯವನ್ನು ಬಿಟ್ಟು ಹೋಗಬೇಕು ಎಂದು ಪ್ರಾರ್ಥನೆ ಮಾಡಲಿದ್ದೇವೆ ಎಂದರು.
ಓದಿ:ಚಿಕ್ಕಮಗಳೂರಲ್ಲಿ ದತ್ತ ಜಯಂತಿ ಸಂಭ್ರಮ : ನಗರವೆಲ್ಲ ಕೇಸರಿ ಮಯ
ಈ ಕಾರ್ಯಕ್ರಮಕ್ಕೆ ರಾಜ್ಯದ ವಿವಿಧ ಮೂಲೆಯಿಂದ ಐದು ನೂರಕ್ಕೂ ಅಧಿಕ ಮಹಿಳೆಯರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಇದೇ ಸಂದರ್ಭದಲ್ಲಿ ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷವೂ ದತ್ತ ಜಯಂತಿಯನ್ನು ಅನಸೂಯ ಪೂಜೆ ಮಾಡಿ ಪ್ರಾರಂಭ ಮಾಡಿದ್ದಾರೆ. ಈ ಕಾರ್ಯಕ್ರಮಕ್ಕೆ ರಾಜ್ಯದ ಮೂಲೆ ಮೂಲೆಯಿಂದ ಮಾತೆಯರು ಬಂದು ಭಾಗವಹಿಸಿದ್ದಾರೆ ಎಂದರು.