ಚಿಕ್ಕಮಗಳೂರು : ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲೊಂದು ಕರುಣಾಜನಕ ಘಟನೆ ಬೆಳಕಿಗೆ ಬಂದಿದೆ. ಮೂಡಿಗೆರೆ ತಾಲೂಕಿನ ಚಿನ್ನಿಗ ಗ್ರಾಮ ಪಂಚಾಯತ್‌ಗೆ ಸೇರಿದ ಜನ್ನಾಪುರದ ಅಣಜೂರಿನಲ್ಲಿ ಕಡುಬಡತನದ ನಡುವೆ ಜೀವಿಸುತ್ತಿರುವ ರಾಜು ಹಾಗೂ ಶಾರದ ದಂಪತಿ ಕುಡಿಯುವ ನೀರಿಗಾಗಿ ಸುಮಾರು ಒಂದೂವರೆ ತಿಂಗಳಿಂದ 55 ಅಡಿ ಬಾವಿ ತೋಡಿದ್ದಾರೆ. ಕೂಲಿ ಮಾಡುವ ಈ ದಂಪತಿ ಬಿಡುವಿನ ಸಮಯದಲ್ಲಿ ಶ್ರಮವಹಿಸಿ ಬಾವಿ ತೋಡಿದ್ದಾರೆ.
ಈ ಕುರಿತು ತಮ್ಮ ಅಳಲು ತೋಡಿಕೊಂಡಿರುವ ದಂಪತಿ, ಕಳೆದ 20 ವರ್ಷಗಳ ಹಿಂದೆ ನಮಗೆ ವಾಸಿಸಲು ಸರ್ಕಾರ ಹಕ್ಕು ಪತ್ರವನ್ನು ವಿತರಣೆ ಮಾಡಿದೆ. ಆದರೆ, ನಾವು ಅನಕ್ಷರಸ್ಥರಾದ ಕಾರಣ ನಮಗೆ ಮನೆ ಕಟ್ಟಲು ಇದುವರೆಗೂ ಆಶ್ರಯ ಮನೆ ನೀಡಿಲ್ಲ.
20 ವರ್ಷಗಳಿಂದ ಟಾರ್ಪಲ್ ಹಾಕಿಕೊಂಡು ಗಾಳಿ, ಮಳೆ ಎನ್ನದೇ ಈ ಜಾಗದಲ್ಲಿ ವಾಸಿಸುತ್ತಿದ್ದೇವೆ. ಹಗಲಿನಲ್ಲಿ ಮಾತ್ರ ಬೆಳಕು, ರಾತ್ರಿ ಸೀಮೆ ಎಣ್ಣೆ ಬುಡ್ಡಿ ಹಚ್ಚಿಕೊಳ್ಳೋಣವೆಂದ್ರೆ ಸರ್ಕಾರ ಸೀಮೆ ಎಣ್ಣೆ ಸಹ ನೀಡುತ್ತಿಲ್ಲ. ಮುಖ್ಯ ರಸ್ತೆಯ ಬದಿಯಲ್ಲಿದ್ದರೂ ಕಾಡು ಜನರಂತೆ ಬದುಕುವ ಸ್ಥಿತಿ ಎದುರಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನಾವು ಅನಕ್ಷರಸ್ಥರಾಗಿರುವ ಕಾರಣ ನಮಗೆ ಯಾರನ್ನು ಕಾಣಬೇಕೆಂದು ಗೊತ್ತಿಲ್ಲ. ಹಾಗಾಗಿ, ಕುಡಿಯುವ ನೀರಿಗಾಗಿ ನಾವಿಬ್ಬರೇ ಜನವರಿ 14 ರಿಂದ ಬಾವಿ ತೆಗೆಯಲು ಪ್ರಾರಂಭಿಸಿದ್ದು, ಇದುವರೆಗೆ 55 ಅಡಿ ಬಾವಿ ತೆಗೆದಿದ್ದೇವೆ. ಇನ್ನೂ ನೀರು ಸಿಕ್ಕಿಲ್ಲ. ನೀರು ಸಿಕ್ಕುವತನಕ ಬಾವಿ ತೆಗೆದೇ ತೀರುತ್ತೇವೆ ಎಂದು ದಂಪತಿ ಕಣ್ಣೀರು ಹಾಕುತ್ತಿದ್ದ ದೃಶ್ಯ ಮನ ಕಲುಕುವಂತಿತ್ತು.
ಈ ದಂಪತಿಗೆ ಇಬ್ಬರು ಮಕ್ಕಳಿದ್ದು, ಅಪ್ಪ-ಅಮ್ಮನ ಕಷ್ಟ ನೋಡಲಾರದೆ ಮಕ್ಕಳಾದ ಶರತ್ ಹಾಗೂ ಸಂಗೀತ ಮಂಗಳೂರಿನಲ್ಲಿ ಮನೆ ಕೆಲಸ ಹಾಗೂ ಹೋಟೆಲ್‌ನಲ್ಲಿ ದುಡಿಯುತ್ತ ಬಂದ ಹಣದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶರತ್ ಐಟಿಐ ಅಭ್ಯಾಸ ಮಾಡುತ್ತಿದ್ದರೆ, ಸಂಗೀತ ಪದವಿ ಶಿಕ್ಷಣವನ್ನು ಪಡೆಯುತ್ತಿದ್ದಾರೆ.
ಇನ್ನು ವಿಚಾರ ತಿಳಿಯುತ್ತಿದ್ದಂತೆ ಮೂಡಿಗೆರೆ ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಣಾಧಿಕಾರಿ ಡಿ.ಡಿ.ಪ್ರಕಾಶ್ ಸ್ಥಳಕ್ಕೆ ಭೇಟಿ ನೀಡಿ, ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿದರು. ನಂತರ ಚಿನ್ನಿಗ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನು ಕರೆಯಿಸಿ ಕುಡಿಯುವ ನೀರಿನ ವ್ಯವಸ್ಥೆಯನ್ನು ತಕ್ಷಣವೇ ಮಾಡುವಂತೆ ಸೂಚನೆ ನೀಡಿದರು. ಜೊತೆಗೆ 20 ವರ್ಷಗಳಿಂದ ಮನೆ ಇಲ್ಲದೆ ವಾಸಿಸುತ್ತಿರುವ ರಾಜುವಿಗೆ ಆಶ್ರಯ ಯೋಜನೆಯಡಿ ಮನೆ ನಿರ್ಮಿಸಿ ಕೊಡಲು ತಹಶೀಲ್ದರ್ ಜೊತೆ ಚರ್ಚಿಸುವುದಾಗಿ ಭರವಸೆ ನೀಡಿದ್ದಾರೆ.