ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಶೇ 30ರಷ್ಟು ಪ್ರಕರಣಗಳಿಗೆ ಸೋಂಕಿನ ಮೂಲವೇ ತಿಳಿಯುತ್ತಿಲ್ಲ. ಹೀಗಾಗಿ ಜಿಲ್ಲೆಯ ಜನರಲ್ಲಿ ಕೊರೊನಾ ಆತಂಕ ಎದುರಾಗಿದೆ.
ಒಬ್ಬರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡರೆ ಅದು ಹೇಗೆ ಬಂತು, ವ್ಯಕ್ತಿಯ ಟ್ರಾವೆಲ್ ಹಿಸ್ಟರಿ ಹಾಗೂ ಸೋಂಕಿತರ ಸಂಪರ್ಕದಲ್ಲಿದ್ದವರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತದೆ. ಆ ಬಳಿಕ ಸಂಪರ್ಕಿತರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗುತ್ತದೆ. ಆದರೆ, ಕಾಫಿನಾಡಿನಲ್ಲಿ ಸದ್ಯ ಪತ್ತೆಯಾಗುತ್ತಿರುವ ಬಹುತೇಕ ಪ್ರಕರಣಗಳಿಗೆ ಹಿಂದೆ-ಮುಂದೆ ಏನೂ ಇಲ್ಲದಂತಾಗಿದೆ. ಬಹುತೇಕ ಪ್ರಕರಣದಲ್ಲಿ ಟ್ರಾವೆಲ್ ಹಿಸ್ಟರಿಯೇ ಇಲ್ಲದಂತಾಗಿದ್ದು, ಸೋಂಕು ಯಾರಿಂದ ಬಂತು, ಎಲ್ಲಿಂದ ಬಂತು ಅನ್ನೋದು ಗೊತ್ತಾಗುತ್ತಿಲ್ಲ. ಹೀಗೆ ಸೋಂಕಿನ ಮೂಲವೇ ಗೊತ್ತಿಲ್ಲದ ಪ್ರಕರಣಗಳು ಜನರಲ್ಲಿ ಆತಂಕ ಮೂಡಿಸುತ್ತಿವೆ.
ಸದ್ಯ, ಜಿಲ್ಲೆಯಲ್ಲಿ 400ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿದ್ದು, 15 ಮಂದಿ ಈಗಾಗಲೇ ಸಾವನ್ನಪ್ಪಿದ್ದಾರೆ. ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವುದರಿಂದ ಜಿಲ್ಲಾಡಳಿತ ಕೂಡ ಟ್ರಾವೆಲ್ ಹಿಸ್ಟರಿಯಿಲ್ಲದ ಪ್ರಕರಣಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ.
ಒಟ್ಟಾರೆಯಾಗಿ ಸೋಂಕಿನ ಮೂಲವೇ ಗೊತ್ತಿಲ್ಲದ ಪ್ರಕರಣಗಳು ಒಂದೆಡೆಯಾದರೆ, ಕೊರೊನಾ ಸೋಂಕು ಪತ್ತೆಹಚ್ಚಲು ಜಿಲ್ಲೆಯಲ್ಲಿ ಲ್ಯಾಬ್ ಕೂಡ ಇಲ್ಲ. ಶಂಕಿತರ ಗಂಟಲು ದ್ರವವನ್ನು ಶಿವಮೊಗ್ಗ, ಹಾಸನ, ಮೈಸೂರು ಈ ಜಿಲ್ಲೆಗಳಿಗೆ ಕಳುಹಿಸಿಕೊಡಬೇಕು. ಆ ರಿಪೋರ್ಟ್ ಬರುವ ವೇಳೆಗೆ ಟೆಸ್ಟ್ ಮಾಡಿಸಿದ ವ್ಯಕ್ತಿ ಹತ್ತಾರು ಭಾಗದಲ್ಲಿ ಸಂಚಾರ ಮಾಡಿರುತ್ತಾನೆ. ಹೀಗಾಗಿ ಜಿಲ್ಲೆಯಲ್ಲಿಯೇ ಒಂದು ಲ್ಯಾಬ್ ನಿರ್ಮಾಣ ಮಾಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.