ಚಿಕ್ಕಮಗಳೂರು : ಮಲೆನಾಡು ಪ್ರವಾಸಿಗರ ಪಾಲಿನ ಸ್ವರ್ಗ. ಹಸಿರು ಸೀರೆಯುಟ್ಟು ಕಂಗೊಳಿಸುವ ಪ್ರಕೃತಿ ದೇವತೆ ಪ್ರವಾಸಿಗರನ್ನು ಪ್ರತಿನಿತ್ಯ ಕೈಬೀಸಿ ತನ್ನತ್ತ ಕರೆಯುತ್ತಿದ್ದಾಳೆ.
ಜಿಲ್ಲೆಯ ಪ್ರಮುಖ ಯಾತ್ರಾ ಸ್ಥಳ ಶೃಂಗೇರಿಯ ಶ್ರೀ ಶಾರದಾ ಪೀಠ ಆಧ್ಯಾತ್ಮಿಕ ಮತ್ತು ಧಾರ್ಮಿಕ ಶ್ರದ್ದಾ ಕೇಂದ್ರವಾಗಿರುವುದರ ಜೊತೆಗೆ ತುಂಗಾ ನದಿಯಲ್ಲಿರುವ ಸಾವಿರಾರು ಮೀನುಗಳು ನಿತ್ಯ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿವೆ. ಮೀನುಗಳನ್ನು ನೋಡಿ ಅವುಗಳಿಗೆ ಆಹಾರ ಹಾಕೋದೇ ಒಂದು ಸೊಬಗು. ಕ್ಷೇತ್ರಕ್ಕೆ ಆಗಮಿಸುವ ಭಕ್ತರು ಶಾರದಾಂಬೆಯ ದರ್ಶನ ಮತ್ತು ಜಗದ್ಗುರುಗಳ ಆಶೀರ್ವಾದ ಪಡೆದು ಕೃತಾರ್ಥರಾದರೆ, ಪ್ರವಾಸಿಗರು ಅಲ್ಲಿನ ಅದ್ಭುತ ವಾಸ್ತುಶಿಲ್ಪ ಮನಮೋಹಕ ಪ್ರಕೃತಿ ಹಾಗೂ ತುಂಗಾ ನದಿಯ ಸಹಸ್ರಾರು ಮೀನುಗಳನ್ನು ಕಂಡು ಪುಳಕಿತರಾಗುತ್ತಿದ್ದಾರೆ. ಶ್ರೀಮಠದ ಸ್ನಾನಘಟ್ಟದಲ್ಲಿ ಮಾತ್ರ ಕಂಡು ಬರುವ ಗಜ ಗಾತ್ರದ ಮೀನುಗಳು ಪ್ರವಾಸಿಗರ ಮತ್ತು ಮಕ್ಕಳ ಮನ ಸೂರೆಗೊಳ್ಳುತ್ತಿವೆ.
ಈ ದೇವಿ ದರ್ಶನ ಪಡೆಯಲು ಮತ್ತು ಇಲ್ಲಿನ ಮೀನುಗಳನ್ನು ನೋಡಲು ರಾಜ್ಯದಿಂದ ಮಾತ್ರವಲ್ಲದೇ ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸುತ್ತಾರೆ. ಶಾಲೆಗಳಿಗೆ ಬೇಸಿಗೆ ರಜೆ ಇರುವುದರಿಂದ ದಿನದಿಂದ ದಿನಕ್ಕೆ ದೇವಸ್ಥಾಕ್ಕೆ ಬರುವ ಭಕ್ತರ ಸಂಖ್ಯೆಯೂ ಹೆಚ್ಚಾಗಿದೆ.