ಮುಂಬೈ(ಮಹಾರಾಷ್ಟ್ರ): ಮುಂಬೈನ ಗೇಟ್‌ವೇ ಆಫ್ ಇಂಡಿಯಾ ಸಮೀಪ ಪ್ರಯಾಣಿಕರಿದ್ದ ದೋಣಿಗೆ ಸ್ಪೀಡ್‌ಬೋಟ್ ಡಿಕ್ಕಿ ಹೊಡೆದು 13 ಮಂದಿ ಮೃತಪಟ್ಟಿದ್ದು, 101 ಮಂದಿಯನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತರಲ್ಲಿ ಮೂವರು ನೌಕಾಪಡೆ ಸಿಬ್ಬಂದಿ, 10 ಮಂದಿ ಪ್ರಯಾಣಿಕರು ಸೇರಿದ್ದಾರೆ.
100ಕ್ಕೂ ಹೆಚ್ಚು ಪ್ರವಾಸಿಗರು ಮತ್ತು ಐವರು ಸಿಬ್ಬಂದಿಯಿದ್ದ ನೀಲಕಮಲ್ ದೋಣಿ ಮುಂಬೈ ಬಳಿಯ ಜನಪ್ರಿಯ ಪ್ರವಾಸಿ ತಾಣವಾದ ಎಲಿಫೆಂಟಾ ದ್ವೀಪಗಳಿಗೆ ತೆರಳುತ್ತಿದ್ದಾಗ ಸ್ಪೀಡ್ ಬೋಟ್ ಡಿಕ್ಕಿಯಾಗಿದೆ. ಅಪಘಾತದ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ನೌಕಾಪಡೆ ಮತ್ತು ಕೋಸ್ಟ್ ಗಾರ್ಡ್ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ರಕ್ಷಣೆಗಾಗಿ 11 ನೌಕಾಪಡೆಯ ದೋಣಿಗಳು ಮತ್ತು ಮೂರು ಕೋಸ್ಟ್ ಗಾರ್ಡ್ ದೋಣಿಗಳನ್ನು ನಿಯೋಜಿಸಲಾಗಿದೆ. ನಾಲ್ಕು ಹೆಲಿಕಾಪ್ಟರ್‌ಗಳು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಸಿಎಂ ದೇವೇಂದ್ರ ಫಡ್ನವೀಸ್ ಪ್ರತಿಕ್ರಿಯೆ: ನಾಗ್ಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, "ಇಂದು ಮಧ್ಯಾಹ್ನ 3.55ರ ಸುಮಾರಿಗೆ ನೀಲಕಮಲ್ ಎಂಬ ಪ್ರಯಾಣಿಕರ ದೋಣಿಗೆ ನೌಕಾಪಡೆಯ ಸ್ಪೀಡ್‌ಬೋಟ್ ನಿಯಂತ್ರಣ ಕಳೆದುಕೊಂಡು ಡಿಕ್ಕಿಯಾಗಿದ್ದರಿಂದ 13 ಮಂದಿ ಸಾವನ್ನಪ್ಪಿದ್ದು, 101 ಮಂದಿಯನ್ನು ರಕ್ಷಿಸಲಾಗಿದೆ. ಮೃತರಲ್ಲಿ ಭಾರತೀಯ ನೌಕಾಪಡೆಯ ಮೂವರು ಮತ್ತು 10 ಮಂದಿ ಪ್ರಯಾಣಿಕರು ಸೇರಿದ್ದಾರೆ. ಗಂಭೀರವಾಗಿ ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ" ಎಂದು ತಿಳಿಸಿದರು.
₹5 ಲಕ್ಷ ಪರಿಹಾರ: ಮೃತರ ಕುಟುಂಬಸ್ಥರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಐದು ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಸಿಎಂ ದೇವೇಂದ್ರ ಫಡ್ನವೀಸ್ ಘೋಷಿಸಿದ್ದಾರೆ.
ಇದನ್ನೂ ಓದಿ: ಕೋಲಾರ: 3 ಬೈಕ್ಗಳಿಗೆ ಬೊಲೆರೋ ವಾಹನ ಡಿಕ್ಕಿ, ಐವರು ಸ್ಥಳದಲ್ಲೇ ಸಾವು