ಚಿಕ್ಕಮಗಳೂರು : ಹಚ್ಚ ಹಸಿರಿನ ಕಾಫಿ ತೋಟದಲ್ಲಿ ಹಾಲಿನ ನೊರೆಯಂತೆ ಅರಳಿ ನಿಂತ ಹೂಗಳು, ಹೂಗಳ ಮಕರಂದ ಹೀರುತ್ತಿರುವ ದುಂಬಿಗಳು. ಕಾಫಿ ಹೂಗಳ ಸುಗಂಧದ ಬಗ್ಗೆ ಎಷ್ಟು ಹೇಳಿದರೂ ಕಡಿಮೆ.
ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ರೊಬೊಸ್ಟಾ ಹಾಗೂ ಅರೇಬಿಕಾ ಕಾಫಿ ಬೆಳೆಯಲಾಗುತ್ತದೆ. ಕಳೆದ ಕೆಲ ದಿನಗಳ ಹಿಂದೇ ಸುರಿದ ಮಳೆಯಿಂದ, ಕಾಫಿ ಗಿಡಗಳಲ್ಲಿ ಹೂಗಳು ಅರಳಿ ನಿಂತಿದ್ದು, ಸುವಾಸನೆ ಎಲ್ಲೆಡೆ ಬೀರಲು ಪ್ರಾರಂಭಿಸಿವೆ.
ಈ ಹೂಗಳ ಸೌಂದರ್ಯ ಹಾಗೂ ಸುವಾಸನೆ ಸ್ಥಳೀಯರು ಹಾಗೂ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದ್ದು, ತಣ್ಣನೆಯ ವಾತಾವರಣದ ನಡುವೆ ಹೂಗಳ ಚೆಲುವು ಮಂತ್ರ ಮಗ್ದರನ್ನಾಗಿಸಿವೆ. ಕಳೆದ ವರ್ಷ ಮಲೆನಾಡು ಭಾಗದಲ್ಲಿ ಸುರಿದ ಧಾರಾಕಾರ ಮಳೆಯಿಂದ ಬಹು ಬೇಗನೇ ಕಾಫಿ ಹೂಗಳು ಅರಳಿ ನಿಂತಿದ್ದು, ಕಾಫಿ ಗಿಡಗಳ ಮೇಲೆ ಮಂಜಿನ ಹನಿಗಳಂತೆ ಸಾಲು ಸಾಲಾಗಿ ಕಂಗೊಳಿಸುತ್ತಿವೆ.
ಅರಳಿ ನಿಂತಿರುವ ಹೂವಿನ ದಳಗಳು ಪ್ರತಿಯೊಬ್ಬರಲ್ಲಿಯೂ ಸಂತೋಷದ ಜೊತೆ ಪ್ರಕೃತಿಯ ಪ್ರೇಮ ಮೂಡಿಸುತ್ತಿದ್ದು, ವಿಭಿನ್ನ ಹಾಗೂ ವಿಶೇಷ ಲೋಕಕ್ಕೆ ಹೋಗಿ ಬಂದಂತೆ ಭಾಸವಾಗುತ್ತಿದೆ. ಸದ್ಯ ಈ ಸಮಯದಲ್ಲಿ ಕಾಫಿನಾಡಿಗೆ ಬರುವ ಪ್ರವಾಸಿಗರಿಗೆ ಈ ಹೂಗಳು ವಿಶೇಷ ಅನುಭವ ನೀಡುತ್ತಿದ್ದು, ಜೊತೆಗೆ ಸುಮಧುರ ಕ್ಷಣಗಳನ್ನು ಕಳೆಯುವುದಕ್ಕೆ ಹೇಳಿ ಮಾಡಿಸಿದಂತಾಗಿದೆ.
ತೋಟಗಳಲ್ಲಿ ಅರಳಿರೋ ಹೂವುಗಳು ಕಾಫಿನಾಡ ಇತಿಹಾಸದ ಬಗ್ಗೆ ಹೇಳುತ್ತಿದ್ದು, ಇದನ್ನು ನೋಡುವುದು ಹಾಗೂ ಇದರ ಸೌಂದರ್ಯ ಸವಿಯುವುದೇ ವಿಶೇಷ ಅನುಭವ.