ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಮಳೆಯಿಂದ ಅನಾಹುತಕ್ಕೀಡಾಗಿದ್ದ, ನೆರೆ ಹಾನಿ ಪ್ರದೇಶಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ಮೂಡಿಗೆರೆಯ ಮಲೆ ಮನೆ ಗ್ರಾಮಕ್ಕೆ ಭೇಟಿ ನೀಡಿ ಸ್ಥಳೀಯ ಜನರ ಅಹವಾಲು ಕೇಳಿದ್ರು. ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮೂಡಿಗೆರೆ ತಾಲೂಕಿನಲ್ಲಿ ಆಗಿರುವ ಅನಾಹುತ ಬೇರೆಲ್ಲೂ ಆಗಿಲ್ಲ. ಇತರೆ ಅಭಿವೃದ್ಧಿ ಕಾಮಗಾರಿ ನಿಂತರು ಪರವಾಗಿಲ್ಲ. ಆದರೆ ಸಂತ್ರಸ್ತರಿಗೆ ಸೂರು ಕಲ್ಪಿಸೋದು ನಮ್ಮ ಮೊದಲ ಆದ್ಯತೆ ಆಗಲಿದೆ. ಕೇಂದ್ರದ ನೆರವಿನೊಂದಿಗೆ ಅಭಿವೃದ್ಧಿಗೆ ಎಷ್ಟು ಹಣ ಬೇಕಾದ್ರೂ ಕೊಡಲು ಸಿದ್ಧನಿದ್ದೇನೆ ಎಂದರು.
ನೆರೆ ಕುರಿತು ಅಧಿವೇಶನ ಕರೆಯುವಂತೆ ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಅಧಿವೇಶನ ಕರೆಯುವುದಕ್ಕೆ ಯಾವುದೇ ಅಭ್ಯಂತರವಿಲ್ಲ. ಅಧಿವೇಶನ ಕರೆದು ಚರ್ಚೆ ಮಾಡುತ್ತೇವೆ ಎಂದರು.
ಇನ್ನು ಖಾತೆ ಹಂಚಿಕೆಯ ಬಳಿಕ ಸಿ.ಟಿ.ರವಿ ಅಸಮಾಧಾನಗೊಂಡಿರುವ ಕುರಿತು ಪ್ರಶ್ನೆ ಕೇಳಿದಾಗ ಬಿ.ಎಸ್.ಯಡಿಯೂರಪ್ಪ ಗರಂ ಆಗಿದ್ದು, ನಾನು ಬಂದಿರುವುದು ನೆರೆ ವೀಕ್ಷಣೆಗೆ. ಖಾತೆ ವಿಚಾರಕ್ಕಲ್ಲ ಎಂದು ಹೇಳಿ ಮಾಧ್ಯಮಗಳ ಮೇಲೆ ಸಿಡಿಮಿಡಿಗೊಂಡರು.