ಚಿಕ್ಕಮಗಳೂರು: ನಾನು ಮತ್ತು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಒಂದಲ್ಲ ಒಂದು ದಿನ ಸೇರೇ ಸೇರುತ್ತೇವೆ. ನಾನು ಅವರು ಒಂದೇ ರೈಲಿನಲ್ಲಿ ಪ್ರಯಾಣಿಸೋದು, ಆದ್ರೆ ನಿಲ್ದಾಣ ಮಾತ್ರ ಬೇರೆ, ಬೇರೆ. ಯಾವಾಗ ಸೇರುತ್ತೇವೊ ಗೊತ್ತಿಲ್ಲ ಎಂದು ವಿಧಾನಪರಿಷತ್ ಸದಸ್ಯ ಮತ್ತು ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ ಹೇಳಿದ್ದಾರೆ.
ಅಜ್ಜಂಪುರ ತಾಲೂಕಿನ ಸೊಲ್ಲಾಪುರದಲ್ಲಿ ನಡೆಯುತ್ತಿರುವ ಶಿವಯೋಗಿ ಶ್ರೀ ಗುರು ಸಿದ್ದರಾಮೇಶ್ವರ 847 ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪ ಅವರನ್ನು ಹಾಡಿ ಹೊಗಳಿದ್ದು, ಇದರಿಂದ ಸಿಎಂ ಇಬ್ರಾಹಿಂ ಬಿಜೆಪಿ ಸೇರುತ್ತಾರಾ? ಎಂಬ ಚರ್ಚೆಗಳು ಶುರುವಾಗಿದೆ.
ಯಡಿಯೂರಪ್ಪ ನನ್ನ ಆತ್ಮೀಯ ಸ್ನೇಹಿತ ಎನ್ನುತ್ತಲೇ ಮಾತು ಪ್ರಾರಂಭಿಸಿದ ಇಬ್ರಾಹಿಂ, ಮಾಜಿ ಸಿಎಂ ಸಿದ್ದರಾಮಯ್ಯರನ್ನ ತೆಗಳಿದ್ದು, ಲಿಂಗಾಯತ ಪ್ರತ್ಯೇಕ ಧರ್ಮ ಬೇಡ ಎಂದು ಸಿದ್ದರಾಮಯ್ಯಗೆ ಹೇಳಿದ್ದೆ. ಈ ಜಗಳದಲ್ಲಿ ಬೀಳಬೇಡ ಎಂದರೂ ನನ್ನ ಮಾತು ಕೇಳಲಿಲ್ಲ ಎಂದು ಹೇಳಿದ್ದಾರೆ.