ಚಿಕ್ಕಮಗಳೂರು: ಕೊರೊನಾ ಲಾಕ್ಡೌನ್ನಿಂದ ಕಳೆದೆರಡು ತಿಂಗಳಿಂದ ಬಸ್ಗಳು ರಸ್ತೆಗಳಿದಿಲ್ಲ. ಇದೀಗ ಸರ್ಕಾರ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ. ಆದರೆ, ಜಿಲ್ಲೆಯ ಖಾಸಗಿ ಬಸ್ ಮಾಲೀಕರು ತೆರಿಗೆ ಹಣವನ್ನು ಮರು ಪಾವತಿಸದೇ ಬಸ್ಗಳನ್ನು ಬಿಡುವುದಿಲ್ಲ ಎಂಬ ನಿರ್ಧಾರ ಕೈಗೊಂಡಿದ್ದು, ಜನರು ಪರದಾಡುವಂತಾಗಿದೆ.
ರಾಜ್ಯಾದ್ಯಂತ ನಾಲ್ಕನೇ ಹಂತದ ಲಾಕ್ಡೌನ್ ಜಾರಿಯಲ್ಲಿದ್ದು, ಕೆಲವೊಂದು ಸಡಿಲಿಕೆ ಮಾಡಲಾಗಿದೆ. ಇದರಂದ ಎಲ್ಲ ಕಡೆ ಬಸ್ ಸಂಚಾರ ಆರಂಭವಾಗಿದೆ. ಆದರೆ ಜಿಲ್ಲೆಯಲ್ಲಿ ಯಾವುದೇ ಖಾಸಗಿ ಬಸ್ಗಳು ಮಾತ್ರ ರಸ್ತೆಗಿಳಿದಿಲ್ಲ.
ಈಗಾಗಲೇ ಖಾಸಗಿ ಬಸ್ ಮಾಲೀಕರು ಏಪ್ರಿಲ್ ಹಾಗೂ ಮೇ ತಿಂಗಳಿನ ಬಸ್ಗಳ ತೆರಿಗೆ ಹಣ ಸರ್ಕಾರಕ್ಕೆ ಪಾವತಿ ಮಾಡಿದ್ದಾರೆ. ಮೋಟಾರ್ ವಾಹನ ಕಾಯ್ದೆ ಪ್ರಕಾರ ವಾಹನಗಳು ರಸ್ತೆಗೆ ಇಳಿದಿದ್ದರೆ ತೆರಿಗೆಯ ಹಣ ಪರಿಗಣನೆಗೆ ಬರುವುದಿಲ್ಲ. ಆ ಹಣ ಬಸ್ಗಳ ಮಾಲೀಕರಿಗೆ ವಾಪಸ್ ಬರಬೇಕು. ಆದರೆ, ಆ ಹಣವನ್ನು ಸರ್ಕಾರ ಬಸ್ ಮಾಲೀಕರಿಗೆ ವಾಪಸ್ ಮಾಡದೇ ಮುಂದಿನ ದಿನಗಳಲ್ಲಿ ಹೊಂದಾಣಿಕೆ ಮಾಡಿ ಕೊಡುತ್ತೇವೆ ಎಂಬ ಭರವಸೆ ನೀಡಿದ್ದು, ಇದಕ್ಕೆ ಮಾಲೀಕರು ಒಪ್ಪುತ್ತಿಲ್ಲ.
ನಾವು ಪಾವತಿ ಮಾಡಿರುವ ತೆರಿಗೆ ಹಣ ವಾಪಸ್ ನೀಡಬೇಕು. ಮುಂದಿನ ಮೂರು ತಿಂಗಳ ತೆರಿಗೆ ಹಣವನ್ನು ಮನ್ನಾ ಮಾಡಬೇಕು. ಈ ರೀತಿ ಮಾಡಿದರೆ ನಮಗೆ ಸಂಚಾರ ಮಾಡೋದಕ್ಕೆ ಅನುಕೂಲ ಆಗಲಿದೆ. ಜಿಲ್ಲೆ ಗುಡ್ಡಗಾಡು ಪ್ರದೇಶವಾಗಿದ್ದು, ಹಳ್ಳಿ ಹಳ್ಳಿಗೂ ಬಸ್ಗಳು ಸಂಚಾರ ಮಾಡುತ್ತವೆ. ಇಂತಹ ಸಂದರ್ಭದಲ್ಲಿ ನೀವು ಇಷ್ಟೇ ಜನ ಬರಬೇಕು. ಸಾಮಾಜಿಕ ಅಂತರ ಕಾಯ್ದು ಕೊಳ್ಳಬೇಕು ಎಂಬಂತಹ ನಿಯಮ ಪಾಲನೆ ಮಾಡುವುದು ಕಷ್ಟ. ಹೆಚ್ಚು ಜನ ಹತ್ತಬೇಡಿ ಎಂದರೆ ಜನರು ಕೇಳುವುದಿಲ್ಲ. ಒಂದು ವೇಳೆ, ನಾವು ಆ ರೀತಿ ಮಾಡಿದರೆ ಜನರ ಮೇಲೆ ತಿರುಗಿ ಬೀಳುತ್ತಾರೆ. ನಾವು ಬಸ್ಗಳ ಸಂಚಾರ ಮಾಡುವುದು ಕಷ್ಟಕರ ಎಂದು ಖಾಸಗಿ ಬಸ್ ಮಾಲೀಕರು ಹೇಳುತ್ತಾರೆ.
ಇನ್ನು ಖಾಸಗಿ ಬಸ್ಗಳಲ್ಲಿ ಕೆಲಸ ಮಾಡುವ ಚಾಲಕರು ಮತ್ತು ನಿರ್ವಾಹಕರ ಪರಿಸ್ಥಿತಿ ಶೋಚನಿಯವಾಗಿದೆ. ನಾವು ಜನರಿಗಾಗಿಯೇ ಕೆಲಸ ಮಾಡುತ್ತಿದ್ದು, ಸರ್ಕಾರ ನಮ್ಮ ಕಡೆ ಮಾತ್ರ ತಿರುಗಿ ನೋಡುತ್ತಿಲ್ಲ. ವಿವಿಧ ಕ್ಷೇತ್ರದ ಜನರಿಗೆ ಸರ್ಕಾರ ಅನುಕೂಲ ಮಾಡಿ ಕೊಟ್ಟಿದೆ. ಆದರೆ, ನಮ್ಮ ಬಗ್ಗೆ ಯೋಚನೆಯೂ ಮಾಡಿಲ್ಲ. ನಮಗೂ ಜೀವನ ಇದೆ. ಮಾಲೀಕರು ಎಷ್ಟು ತಿಂಗಳು ಬಸ್ಗಳನ್ನ ನಿಲ್ಲಿಸಿಕೊಂಡು ಸಂಬಳ ನೀಡೋಕೆ ಸಾಧ್ಯ. ಅವರಿಗೆ ಅವರದೇ ಆದಂತಹ ಸಮಸ್ಯೆಗಳು ಇದ್ದು, ಸರ್ಕಾರ ನಮ್ಮ ಸಹಾಯಕ್ಕೆ ಮುಂದೆ ಬರಬೇಕು ಎಂದು ಚಾಲಕರು ಹಾಗೂ ನಿರ್ವಾಹಕರು ಆಗ್ರಹಿಸಿದ್ದಾರೆ.