ಚಿಕ್ಕಮಗಳೂರು: ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ವ್ಯಾಪ್ತಿಯಲ್ಲಿ 2017ರ ದತ್ತ ಜಯಂತಿ ವೇಳೆಯಲ್ಲಿ ಎರಡು ಗೋರಿ ಜಖಂಗೊಳಿಸಿದ ಪ್ರಕರಣವನ್ನು ಮರು ತನಿಖೆ ನಡೆಸಬೇಕು ಎಂದು ಸಂವಿಧಾನ ಉಳಿವಿಗಾಗಿ ಹೋರಾಟ ಸಮಿತಿಯ ಸದಸ್ಯರು ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ.
2017ರಲ್ಲಿ ನಡೆದಿದ್ದ ದತ್ತ ಜಯಂತಿ ಸಂದರ್ಭದಲ್ಲಿ ಎರಡು ಗೋರಿ ಜಖಂಗೊಳಿಸಿದ ಬಗ್ಗೆ ಅಂದಿನ ಮುಖ್ಯ ಪೊಲೀಸ್ ವರಿಷ್ಠಾಧಿಕಾರಿ ಬಾಬಾಬುಡನ್ ಗಿರಿಯಲ್ಲಿ ಸಾರ್ವಜನಿಕರ ಸಭೆ ಕರೆದಿದ್ದರು. 'ದರ್ಗಾ ಗೋರಿಗಳನ್ನು ಜಖಂಗೊಳಿಸಿದವರ ಮಾಹಿತಿ ಸಿಕ್ಕಿದ್ದು, ಅವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುತ್ತೇವೆ' ಎಂದು ಭರವಸೆ ನೀಡಿದ್ದರು. ನಂತರ ಮೊಕದ್ದಮೆ ದಾಖಲು ಮಾಡಿಕೊಂಡು ಅವರನ್ನು ವಿಚಾರಣೆಗೆ ಒಳಪಡಿಸಿದರು. ಕೆಲವೇ ದಿನಗಳಲ್ಲಿ ಕೃತ್ಯ ಎಸಗಿದವರು ಸಿಗಲಿಲ್ಲ ಎಂದು ಪ್ರಕರಣವನ್ನು ಮುಕ್ತಾಯ ಮಾಡಿದ್ದರು ಎಂದು ಸಮಿತಿ ಸದಸ್ಯರು ಹೇಳಿದರು.
ಸಂಘ ಪರಿವಾರದ ನಾಯಕರಾದ ತುಡುಕೂರು ಮಂಜು ಹಾಗೂ ಅನಿಲ್ ಕೋಟೆ ಅವರ ಮೊಬೈಲ್ ಫೇಸ್ಬುಕ್ನಲ್ಲಿ ಈ ಕುರಿತು ಚರ್ಚೆ ನಡೆದಿದೆ. ತುಡುಕೂರು ಮಂಜು ಅವರು ಶಾಸಕರ ಅಣತಿಯಂತೆ ಬಾಬಾಬುಡನ್ ಗಿರಿಯ ಗೋರಿಗಳನ್ನು ಜಖಂಗೊಳಿಸಿದ್ದೆವು. ಆದರೆ, ಶಾಸಕರು ನಮ್ಮನ್ನು ರಕ್ಷಿಸಲಿಲ್ಲ. ನಮ್ಮ ರಕ್ಷಣೆ ನಾವೇ ಮಾಡಿಕೊಳ್ಳಬೇಕಾಯಿತು. ಅದಕ್ಕೆ ಪ್ರತಿಯಾಗಿ ಕೋಟೆ ಅನಿಲ್ ಅವರು ಶಾಸಕರ ಬಗ್ಗೆ ಏನಾದರೂ ಹೇಳಿದರೆ, ನಿನಗೆ ಖಾಡ್ಯ ಪ್ರವೀಣನಿಗೆ ಆದ ಗತಿಯೇ ಆಗುತ್ತದೆ ಎಂದು ಬೆದರಿಕೆ ಹಾಕಿರುವುದು ಫೇಸ್ಬುಕ್ ಮೂಲಕ ತಿಳಿದು ಬರುತ್ತಿದೆ ಎಂದು ಸಮಿತಿಯ ರಾಜ್ಯ ಸಂಚಾಲಕ ಗೌಸ್ ಮೋಹಿಯುದ್ದಿನ್ ಆರೋಪಿಸಿದ್ದಾರೆ.
2017ರ ಗೋರಿ ಜಖಂಗೊಳಿಸಿದ ಪ್ರಕರಣವನ್ನು ಮರು ತನಿಖೆಗೆ ಒಳಪಡಿಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.