ಚಿಕ್ಕಮಗಳೂರು: ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿ ಠಾಣೆಯಿಂದ ತಪ್ಪಿಸಿಕೊಂಡ ಪ್ರಕರಣದಲ್ಲಿ ಸಖರಾಯಪಟ್ಟಣ ಠಾಣೆಯ ಓರ್ವ ಎಎಸ್ಐ ಹಾಗೂ ಇಬ್ಬರು ಕಾನ್ಸ್ಟೇಬಲ್ಗಳನ್ನು ಅಮಾನತು ಮಾಡಲಾಗಿದೆ.
ಘಟನೆಯ ವಿವರ:
ಜಿಲ್ಲೆಯ ಕಡೂರು ಬಳಿ ಕಾಫಿ ತೋಟದ ಕೆಲಸಕ್ಕೆಂದು ಬಳ್ಳಾರಿ ಮೂಲದ ಕುಟುಂಬವೊಂದನ್ನು ರಘು ಎಂಬಾತ ಕರೆದುಕೊಂಡು ಬಂದಿದ್ದ. ಈತ ಕೂಡ ಬಳ್ಳಾರಿ ಮೂಲದವನೇ ಆಗಿದ್ದ. ಹೀಗೆ ಕುಟುಂಬವನ್ನು ಕರೆದುಕೊಂಡು ಬಂದ ರಘು, ಅಪ್ಪ-ಅಮ್ಮನನ್ನು ಒಂದು ತೋಟದಲ್ಲಿ ಬಿಟ್ಟು, ಅವರ ಮಗಳನ್ನು ಮತ್ತೊಂದು ತೋಟಕ್ಕೆ ಕರೆದುಕೊಂಡು ಹೋಗುವ ನೆಪದಲ್ಲಿ, ಕಡೂರು ರಸ್ತೆಯ ಹಿರೇಗೌಜ ಗ್ರಾಮದ ಕಾಡಿಗೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದ.
ಅಲ್ಲದೆ, ಪ್ರತಿರೋಧ ವ್ಯಕ್ತಪಡಿಸಿದ ಬಾಲಕಿಗೆ ಮೂಗು-ಬಾಯಲ್ಲಿ ರಕ್ತ ಬರುವಂತೆ ಹೊಡೆದಿದ್ದಾನೆ. ಈ ವೇಳೆ ಬಾಲಕಿ ಕೂಗಾಡುವ ಶಬ್ದ ಕೇಳಿ ಅಕ್ಕ ಪಕ್ಕದ ತೋಟದಲ್ಲಿದ್ದವರು ಧಾವಿಸಿ ಬಂದು ರಕ್ಷಿಸಿದ್ದರು. ಕಾಮುಕ ರಘುವಿಗೆ ಹಿಗ್ಗಾಮುಗ್ಗಾ ಗೂಸಾ ಕೊಟ್ಟು, ಸಖರಾಯಪಟ್ಟಣ ಠಾಣೆಯ ಪೊಲೀಸರಿಗೆ ಒಪ್ಪಿಸಿದ್ದರು. ಈತನ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿತ್ತು.
ಇದನ್ನೂ ಓದಿ: ಸಿಡಿ ಲೇಡಿ ಕೋರ್ಟ್ಗೆ ಹಾಜರ್: ಸಂಕಷ್ಟ ನಿವಾರಣೆಗಾಗಿ ಮಹಾಲಕ್ಷ್ಮಿ ದೇವಾಲಯಕ್ಕೆ ರಮೇಶ್ ದಿಢೀರ್ ಭೇಟಿ
ಆರೋಪಿಯನ್ನು ಬಂಧಿಸಿದ ಪೊಲೀಸರು, ಆತನ ವಿರುದ್ಧ ಪೊಕ್ಸೊ ಪ್ರಕರಣ ದಾಖಲಿಸಿ ಲಾಕ್ ಅಪ್ನಲ್ಲಿ ಹಾಕಿದ್ದರು. ಆದರೆ, ಆರೋಪಿ ಇದ್ದಕ್ಕಿದ್ದಂತೆ ಲಾಕ್ ಅಪ್ನಿಂದ ಎಸ್ಕೇಪ್ ಆಗಿದ್ದ. ಆರೋಪಿ ಅವನಾಗಿಯೇ ತಪ್ಪಿಸಿಕೊಂಡನೋ ಅಥವಾ ಪೊಲೀಸರೇ ಬಿಟ್ಟು ಕಳುಹಿಸಿದರೋ ಎಂಬುವುದರ ಕಾರಣ ಇಂದಿಗೂ ನಿಗೂಢವಾಗಿದೆ. ಆರೋಪಿ ಠಾಣೆಯಿಂದ ತಪ್ಪಿಸಿಕೊಂಡ ಬಳಿಕ ಮತ್ತೆ ಹುಡುಕಾಟ ಪ್ರಾರಂಭಿಸಿದ ಪೊಲೀಸರು ಆತನನ್ನು ಮತ್ತೆ ಹುಡುಕಿ ತಂದಿದ್ದರು. ಆದರೆ, ಪೊಕ್ಸೊ ಪ್ರಕರಣದ ಆರೋಪಿ ತಪ್ಪಿಸಿಕೊಂಡಿದ್ದನ್ನು ಗಂಭೀರವಾಗಿ ಪರಿಗಣಿಸಿದ ಎಸ್ಪಿ ಅಕ್ಷಯ್, ಸಖರಾಯಪಟ್ಟಣ ಠಾಣೆಯ ಓರ್ವ ಎಎಸ್ಐ ಮತ್ತು ಇಬ್ಬರು ಕಾನ್ಸ್ಟೇಬಲ್ಗಳನ್ನು ಅಮಾನತು ಮಾಡಿದ್ದಾರೆ.