ಚಿಕ್ಕಮಗಳೂರು: ಜಿಲ್ಲೆಯಲ್ಲಿಂದು 9 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 92ಕ್ಕೆ ಏರಿಕೆಯಾಗಿದೆ. ಈ ದಿನ ಇಬ್ಬರು ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದು, ಒಟ್ಟು 44 ಸಕ್ರಿಯ ಪ್ರಕರಣಗಳಿವೆ.
ತರೀಕೆರೆ ತಾಲೂಕಿನ ಅಜ್ಜಂಪುರ ಮೂಲದ ಓರ್ವ ವೃದ್ಧೆ ಕೊರೊನಾಗೆ ತುತ್ತಾಗಿ ಸಾವನ್ನಪ್ಪಿದ್ದಾರೆ. ಇವತ್ತಿನ 9 ಜನ ಸೋಂಕಿತರು ಚಿಕ್ಕಮಗಳೂರು ತಾಲೂಕಿಗೆ ಸೇರಿದವರಾಗಿದ್ದು, ತಾಲೂಕಿನ ರಾಮದೇವರ ಹಳ್ಳಿಯ ಪೊಲೀಸ್ ಕಾನ್ಸ್ಟೇಬಲ್ ಕುಟುಂಬದ ನಾಲ್ಕು ಜನರಲ್ಲಿ ಸೋಂಕು ಪತ್ತೆಯಾಗಿದ್ದರೆ, ತಾಲೂಕಿನ ವಿವಿಧ ಭಾಗದಲ್ಲಿ ಉಳಿದ ಪ್ರಕರಣಗಳು ದಾಖಲಾಗಿವೆ.
11 ವರ್ಷದ ಹೆಣ್ಣು ಮಗು, 44 ವರ್ಷದ ಮಹಿಳೆ, 19 ವರ್ಷದ ಯುವಕ, 21 ವರ್ಷದ ಯುವತಿ, 62 ವರ್ಷದ ಪುರುಷ, 20 ವರ್ಷದ ಯುವಕ, 46 ವರ್ಷದ ಯುವಕ, 69 ವರ್ಷದ ಪುರುಷ, 46 ವರ್ಷದ ಪುರುಷ ಇವರಲ್ಲಿ ಸೋಂಕು ಪತ್ತೆಯಾಗಿದೆ. ಇವರಲ್ಲಿ ಮೂರು ಜನರಿಗೆ ಐಎಲ್ಐ ಹಾಗೂ ಇನ್ನೊಬ್ಬರಲ್ಲಿ ಎಸ್ಎಆರ್ಐ (sari) ಕೇಸ್ ಪತ್ತೆಯಾಗಿವೆ. ಈ ಸೋಂಕಿತರು ವಾಸ ಮಾಡುತ್ತಿದ್ದ ಏರಿಯಾವನ್ನು ಪೊಲೀಸರು ಹಾಗೂ ಆರೋಗ್ಯ ಇಲಾಖೆಯವರು ಸೀಲ್ ಡೌನ್ ಮಾಡಿದ್ದಾರೆ.
ಜಿಲ್ಲಾ ಆರೋಗ್ಯ ಇಲಾಖೆ ಈ ಸೋಂಕಿತರ ಜೊತೆ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕ ಹೊಂದಿದ್ದ ಜನರನ್ನು ಹುಡುಕುವ ಶೋಧ ಕಾರ್ಯ ಪ್ರಾರಂಭಿಸಿದೆ. ಎಲ್ಲ ಸೋಂಕಿತರನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.