ಚಿಕ್ಕಮಗಳೂರು: ಕಾಫಿನಾಡಲ್ಲಿ ಕಳೆದ ಐದು ದಿನಗಳಿಂದ ಶ್ರೀರಾಮಸೇನೆ ವತಿಯಿಂದ ನಡೆಯುತ್ತಿದ್ದ ದತ್ತಮಾಲಾ ಅಭಿಯಾನ ಮುಕ್ತಾಯಗೊಂಡಿದೆ. ಕೊರೊನಾ ಹಿನ್ನೆಲೆ 200ಕ್ಕೂ ಹೆಚ್ಚು ದತ್ತ ಭಕ್ತರು ದತ್ತ ಪಾದುಕೆ ದರ್ಶನ ಪಡೆದು ಪುನೀತರಾದರು.
ಚಿಕ್ಕಮಗಳೂರು ತಾಲೂಕಿನ ದತ್ತಾತ್ರೇಯ ಬಾಬಬುಡನ್ ಗಿರಿಯಲ್ಲಿ ನಡೆಯುತ್ತಿದ್ದ ದತ್ತಮಾಲಾ ಅಭಿಯಾನ ಮುಕ್ತಾಯಗೊಂಡಿದೆ. ಕೊರೊನಾ ಹಿನ್ನೆಲೆ ಕೇವಲ 200ಕ್ಕೂ ಹೆಚ್ಚು ದತ್ತ ಮಾಲಾಧಾರಿಗಳು ದತ್ತ ಪೀಠಕ್ಕೆ ತೆರಳಿ ಹೋಮ-ಹವನ ನಡೆಸಿ ದತ್ತ ಪಾದುಕೆ ದರ್ಶನ ಪಡೆದರು. ನಂತರ ದತ್ತ ಪೀಠದ ಹೋಮ ಮಂಟಪದಲ್ಲಿ ಮೈಕ್ ಅವಳವಡಿಸುಂತೆ ಆಗ್ರಹಿಸಿ ಕೆಲ ಕಾಲ ದತ್ತ ಮಾಲಾಧಾರಿಗಳು ಪ್ರತಿಭಟನೆ ನಡೆಸಿದರು.
ಜಿಲ್ಲಾಡಳಿತ ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಎರಡು ದಿನದ ಹಿಂದೆ ದತ್ತ ಪೀಠದಲ್ಲಿ ಮೈಕ್ ಬಳಸಿದವರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಒತ್ತಾಯಿಸಿದರು. ನಂತರ ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಮೈಕ್ ಬಳಸಿರೋ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಮಾಲಾಧಾರಿಗಳ ಮನವೊಲಿಸಿದರು. ಇದೇ ವೇಳೆ ಮಾತಾನಾಡಿದ ಕಾಳಿಮಠದ ಖುಷಿಕುಮಾರ ಸ್ವಾಮೀಜಿ, ಸಿ.ಟಿ.ರವಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಮೊದಲು ನಿಮ್ಮ ಊರನ್ನ ಕಾಯಿರಿ, ಆಮೇಲೆ ದೇಶ ಕಾಯಿರಿ ಎಂದು ವಾಗ್ದಾಳಿ ನಡೆಸಿದರು.
ದತ್ತಮಾಲಾ ಅಭಿಯಾನ ಹಿನ್ನೆಲೆ ನಗರ ಹಾಗೂ ದತ್ತ ಪೀಠ ಆವರಣದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ 600ಕ್ಕೂ ಅಧಿಕ ಸಿಬ್ಬಂದಿಯಿಂದ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಕಲ್ಪಿಸಿತ್ತು. ಇನ್ನು ಇದೇ ವೇಳೆ ಮಾತಾನಾಡಿದ ಸಿದ್ದಲಿಂಗ ಸ್ವಾಮೀಜಿ, ಸರ್ಕಾರ ಒಂದು ರೀತಿಯಲ್ಲಿ ನಾಟಕ ಮಾಡುತ್ತಿದೆ. ಹಿಂದುಗಳ ಸರ್ಕಾರ ಅಂತಾರೆ, ಆದರೆ ಹಿಂದುಗಳ ವಿರುದ್ಧವೇ ಪಿತೂರಿ ನಡೆಸುವಂತಹ ಕೆಲಸವಾಗುತ್ತಿದೆ. ಆಯೋಧ್ಯೆಯಂತಹ ವಿವಾದವೇ ಬಗೆಹರಿದಿದೆ. ದತ್ತ ಪೀಠ ಯಾಕೆ ಬಗೆಹರಿದಿಲ್ಲ. ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ದತ್ತ ಪೀಠವನ್ನ ಹಿಂದುಗಳಿಗೆ ಒಪ್ಪಿಸಬೇಕು ಎಂದು ಹೇಳಿದರು.
ಇದನ್ನೂ ಓದಿ: ದತ್ತಪೀಠದ ಪಾದುಕೆಯ ದರ್ಶನದ ವೇಳೆ ಸಚಿವ ಸಿ ಟಿ ರವಿ ನಿಯಮ ಉಲ್ಲಂಘನೆ ಆರೋಪ