ಚಿಕ್ಕಮಗಳೂರು : ಮೂಡಿಗೆರೆ ಶಾಸಕ ಎಂ ಪಿ ಕುಮಾರಸ್ವಾಮಿ ಹರಕೆ ಹೊತ್ತಿದ್ದ ಇತಿಹಾಸ ಪ್ರಸಿದ್ಧ ಫಲ್ಗುಣಿಯ ಕಾಲನಾಥೇಶ್ವರ ದೇವರ ರಥೋತ್ಸವ ಇಂದು ಅದ್ದೂರಿಯಾಗಿ ಜರುಗಿದೆ.
ಪ್ರತಿ ವರ್ಷವೂ ಹೋಳಿ ಹಬ್ಬದ ಮಾರನೇ ದಿನ 14 ಗ್ರಾಮಗಳ ಸಾವಿರಾರು ಜನ ಒಂದೆಡೆ ಸೇರಿ ರಥೋತ್ಸವ ಆಚರಿಸೋದು ಹಿಂದಿನಿಂದಲೂ ನಡೆದುಕೊಂಡು ಬಂದಿರೋ ಸಂಪ್ರದಾಯ. ಐದು ಸಾವಿರಕ್ಕೂ ಹೆಚ್ಚು ಭಕ್ತರು ಕಾಲನಾಥೇಶ್ವರನ ರಥೋತ್ಸವಕ್ಕೆ ಸೇರುತ್ತಿದ್ದರು. ಆದ್ರೆ, ಈ ಬಾರಿ ಕೊರೊನಾ ಹಿನ್ನೆಲೆ ಕೇವಲ ಸಾವಿರ ಭಕ್ತರು ಮಾತ್ರ ಸೇರಿದ್ದರು.
ಹರಕೆ ಹೊತ್ತಿದ್ದ ಶಾಸಕ ಎಂ ಪಿ ಕುಮಾರಸ್ವಾಮಿ : ಬಿ ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾದರೆ ದೇವಸ್ಥಾನಕ್ಕೆ ಮರದ ರಥ ಮಾಡಿಸಿಕೊಡುವುದಾಗಿ ಮೂಡಿಗೆರೆ ಶಾಸಕ ಎಂ ಪಿ ಕುಮಾರಸ್ವಾಮಿ ಮೂಡಿಗೆರೆ ತಾಲೂಕಿನಲ್ಲಿರುವ ಕಾಲನಾಥೇಶ್ವರನಿಗೆ ಹರಕೆ ಹೊತ್ತಿದ್ದರು.
ಅಷ್ಟೇ ಅಲ್ಲ, ಕಳೆದ ಜನವರಿಯಲ್ಲಿ ಇದೇ ವಿಚಾರದ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಪತ್ರ ಬರೆದು ತಮ್ಮ ಹರಕೆ ತೀರಿಸುವುದಕ್ಕಾಗಿಯೇ 30 ಲಕ್ಷ ಹಣವನ್ನ ಬಿಡುಗಡೆ ಮಾಡಿಸಿಕೊಡಬೇಕೆಂದು ಮನವಿ ಮಾಡಿದ್ದರು.
ಓದಿ: ಮನೆ ಮನೆಯಲ್ಲೂ ಬ್ಲ್ಯಾಕ್ ಬೋರ್ಡ್.. ವಿದ್ಯಾರ್ಥಿಗಳ ಭವಿಷ್ಯಕ್ಕೆ ಹೊಸ ನಡೆ ಆರಂಭಿಸಿದ ಚಿಕ್ಕಮಗಳೂರು ಶಿಕ್ಷಕರು
ಹೊಯ್ಸಳರ ಕಾಲದಲ್ಲಿ 1200 ವರ್ಷಗಳ ಹಿಂದೆ ನಿರ್ಮಾಣವಾಗಿರೋ ಈ ದೇವರಿಗೆ ಹರಕೆ ಮಾಡಿಕೊಂಡರೆ ಖಂಡಿತವಾಗಿಯೂ ನೆರವೇರುತ್ತೆ ಅನ್ನೋದು ಭಕ್ತರ ನಂಬಿಕೆ. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಶಾಸಕ ಎಂ ಪಿ ಕುಮಾರಸ್ವಾಮಿ ಕೂಡ ಹರಕೆ ಹೊತ್ತಿದ್ದರು ಅನ್ನೋ ಮಾತಿದೆ. ಆದರೆ, ಹರಕೆ ತೀರಿಸಲು ಸರ್ಕಾರದಿಂದ ಹಣ ಕೇಳಿದ್ದಕ್ಕೆ ಶಾಸಕ ಕುಮಾರಸ್ವಾಮಿ ವಿರುದ್ಧ ಹಲವರು ಆಕ್ರೋಶ ಕೂಡ ವ್ಯಕ್ತಪಡಿಸಿದ್ರು.