ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ಪ್ರಪಾತದಿಂದ ಕಾರು ಉರುಳಿ ಮನೆ ಮೇಲೆ ಬಿದ್ದು ಮನೆ ಸಂಪೂರ್ಣ ಹಾನಿಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಗಂಗನ ಕುಡಿಕೆ ಗ್ರಾಮದಲ್ಲಿ ನಡೆದಿದೆ. ಬೆಳಗಿನ ಜಾವ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಪ್ರಪಾತದಿಂದ ಕಾರು ಉರುಳಿ ಮನೆಯ ಗೋಡೆಗೆ ಗುದ್ದಿದ ಪರಿಣಾಮ ಮನೆ ಸಂಪೂರ್ಣ ಹಾನಿಯಾಗಿದೆ. ಅದೃಷ್ಟವಶಾತ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಐವರು ಪ್ರಾಣಾಪಾಯದಿಂದ ಪಾರಾಗಿದ್ದು, ಸಣ್ಣ ಪುಟ್ಟ ಗಾಯಗಳಾಗಿವೆ. ಬೆಂಗಳೂರಿನಿಂದ ಹೊರನಾಡು ದೇವಸ್ಥಾನಕ್ಕೆ ಹೊರಟಿದ್ದ ವೇಳೆ ಈ ಘಟನೆ ನಡೆದಿದೆ. ಈ ಘಟನೆ ಬಗ್ಗೆ ಮಾಹಿತಿ ತಿಳಿದ ಕೂಡಲೇ ಕಳಸ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿ, ಈ ಕುರಿತು ಪ್ರಕರಣವನ್ನು ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಬ್ರೇಕ್ ಫೇಲ್ ಆದ ಪರಿಣಾಮ ತಡೆಗೋಡೆಗೆ ಬಸ್ ಡಿಕ್ಕಿ : ಹುಬ್ಬಳ್ಳಿಯಿಂದ ಧಾರವಾಡಕ್ಕೆ ಹೊರಟಿದ್ದ ಬಿಆರ್ಟಿಎಸ್ (ಬಸ್ ಕ್ಷಿಪ್ರ ಸಾರಿಗೆ ವ್ಯವಸ್ಥೆ) ಬಸ್ ಬ್ರೇಕ್ ಫೇಲ್ ಆಗಿ ರಸ್ತೆ ಡಿವೈಡರ್ನಲ್ಲಿ ಸಿಕ್ಕಿ ಹಾಕಿಕೊಂಡ ಘಟನೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಬಳಿ ನಡೆದಿದೆ. ಅದೃಷ್ಟವಶಾತ್ ಚಾಲಕ ಮತ್ತು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನೂ ಘಟನೆ ಸಂಭವಿಸುತ್ತಿದ್ದಂತೆಯೇ ಸ್ಥಳಕ್ಕೆ ಭೇಟಿ ನೀಡಿದ ಬಿಆರ್ಟಿಎಸ್ ಸಿಬ್ಬಂದಿ ಬಸ್ ಹೊರತೆಗೆಯುವ ಕಾರ್ಯಾಚರಣೆ ನಡೆಸಿದರು. ಉತ್ತರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ : ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಬೆದರಿಕೆ ಕರೆ ಪ್ರಕರಣ: ಹಿಂಡಲಗಾ ಜೈಲಿನ ಕೈದಿಯಿಂದ ಎರಡು ಮೊಬೈಲ್, ಸಿಮ್ ಕಾರ್ಡ್ ಜಪ್ತಿ
ಹುಬ್ಬಳ್ಳಿ-ಧಾರವಾಡ ಕಿಲ್ಲರ್ ಬೈಪಾಸ್‌ಗೆ ಮತ್ತೆರಡು ಬಲಿ : ಹುಬ್ಬಳ್ಳಿ ಧಾರವಾಡ ಮಧ್ಯೆ ಇರುವ ಬೈಪಾಸ್ ರಸ್ತೆ ‘ಕಿಲ್ಲರ್ ಬೈಪಾಸ್’ ಎಂದೇ ಕುಖ್ಯಾತಿ ಪಡೆದಿದೆ. ಪ್ರತಿನಿತ್ಯ ಈ ರಸ್ತೆಯಲ್ಲಿ ಒಂದಿಲ್ಲೊಂದು ಅಪಘಾತ ನಡೆದು ವಾಹನ ಸವಾರರು ಸಾವನ್ನಪ್ಪುತ್ತಲೇ ಇರುತ್ತಾರೆ. ಇದೀಗ ಲಾರಿ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಘಟನೆ ಸಂಭವಿಸಿದೆ. ಭೀಮರಾವ್ ಗೋಸಾವಿ (38) ಹಾಗೂ ಏಕನಾಥ ಗೋಸಾವಿ (40) ಮೃತಪಟ್ಟವರು.
ಬೈಪಾಸ್ ರಸ್ತೆಯ ಇಟಿಗಟ್ಟಿ ಬಳಿ ಈ ದುರ್ಘಟನೆ ನಡೆದಿದೆ. ಮೃತಪಟ್ಟವರು ಧಾರವಾಡ ಲಕ್ಷ್ಮೀಸಿಂಗನಕೇರಿ ನಿವಾಸಿಗಳು ಎಂದು ತಿಳಿದು ಬಂದಿದೆ. ಇವರು ಸ್ಟೌ ರಿಪೇರಿ ಮಾಡುವ ಕಾರ್ಮಿಕರಾಗಿದ್ದು, ಬೆಳಗ್ಗೆ ಕೆಲಸದ ನಿಮಿತ್ತ ಹೋಗುವಾಗ ಲಾರಿ ಡಿಕ್ಕಿ ಹೊಡೆದಿದೆ. ಸ್ಥಳಕ್ಕೆ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಕೇಸ್ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ : ಪಿಎಸ್ಐ, ಹೆಡ್ಕಾನ್ಸ್ಟೇಬಲ್ರಿಂದಲೇ ಆರೋಪಿ ಅಪಹರಿಸಿ ಹಣಕ್ಕೆ ಬೇಡಿಕೆ ಆರೋಪ: ಪೊಲೀಸಪ್ಪ ಸೇರಿ ಮೂವರ ಬಂಧನ