ಚಿಕ್ಕಮಗಳೂರು: ಗ್ರೀನ್ ಝೋನ್ ನಲ್ಲಿದ್ದ ಜಿಲ್ಲೆಗೆ ಇಂದು ಮಹಾಮಾರಿ ಕೊರೊನಾ ವೈರಸ್ ಕಾಲಿಟ್ಟಿದ್ದು, ಇಬ್ಬರಿಗೆ ಸೋಂಕು ದೃಢವಾಗಿದೆ. ಮೂಡಿಗೆರೆ ಸರ್ಕಾರಿ ವೈದ್ಯನ ಟ್ರಾವೆಲ್ ಹಿಸ್ಟರಿ ಭಯ ಹುಟ್ಟಿಸುತ್ತಿದ್ದು, ಕಳೆದ 20 ದಿನದಲ್ಲಿ ಬೆಂಗಳೂರು, ಕೊಡಗಿಗೆ ಈ ವೈದ್ಯ ಹೋಗಿ ಬಂದಿದ್ದಾರೆ.
ಕಳೆದ 15 ದಿನದಲ್ಲಿ ಸುಮಾರು 500 ಕ್ಕೂ ಹೆಚ್ಚು ಜನರಿಗೆ ಈ ವೈದ್ಯ ಚಿಕಿತ್ಸೆ ನೀಡಿದ್ದು, ಮೂಡಿಗೆರೆ ನಗರದ ಹಲವರೊಂದಿಗೆ ನೇರ ಸಂಪರ್ಕದಲ್ಲಿದ್ದರು. ವೈದ್ಯನ ಜೊತೆ ಕೆಲಸ ನಿರ್ವಹಿಸುತ್ತಿದ್ದ ನರ್ಸ್, ಆಶಾಗಳಿಗೂ ನಡುಕ ಶುರುವಾಗಿದೆ. ವೈದ್ಯನ ಅಕ್ಕಪಕ್ಕದ ಮನೆಯವರು, ಆಪ್ತವಲಯದಲ್ಲಿ ಭೀತಿ ಹೆಚ್ಚಾಗಿದೆ.
ಈಗಾಗಲೇ ಅನೇಕರನ್ನು ಪರೀಕ್ಷೆಗೆ ಆರೋಗ್ಯ ಇಲಾಖೆ ಒಳಪಡಿಸಿದೆ. ಮುಂಬೈಯಿಂದ ತರೀಕೆರೆಗೆ ಬಂದಿದ್ದ ಗರ್ಭಿಣಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ತರೀಕೆರೆ ಪಟ್ಟಣದ 27 ವರ್ಷದ ಗರ್ಭಿಣಿಯಲ್ಲಿ ಈ ಹೆಮ್ಮಾರಿ ಸೋಂಕು ಪತ್ತೆಯಾಗಿದೆ. ಮೇ 16 ರಂದು ಗರ್ಭಿಣಿಯನ್ನ ಪರೀಕ್ಷೆಗೆ ಒಳಪಡಿಸಲಾಗಿತ್ತು.
ಗರ್ಭಿಣಿಯ ಗಂಟಲು ದ್ರವ, ರಕ್ತದ ಮಾದರಿಯನ್ನು ಹಾಸನದ ಲ್ಯಾಬ್ ಗೆ ಕಳುಹಿಸಲಾಗಿತ್ತು. ಪರೀಕ್ಷೆ ವೇಳೆ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದೆ.