ಚಿಕ್ಕಮಗಳೂರು: ಜಿಲ್ಲೆಯ ಪ್ರಸಿದ್ಧ ಶೃಂಗೇರಿ ಶಾರದಾ ಪೀಠಕ್ಕೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಆಗಮಿಸಿದ್ದಾರೆ.
ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾದ ಶರದ್ ಅರವಿಂದ್ ಬೋಬ್ಡೆ, ಶೃಂಗೇರಿ ಶಾರದಾ ಪೀಠಕ್ಕೆ ಭೇಟಿ ನೀಡಿದ್ದಾರೆ. ಶಾರದಾಂಬೆ ಸನ್ನಿಧಿಗೆ ಬಂದ ನ್ಯಾಯಮೂರ್ತಿಗಳಿಗೆ ಮಠದ ಆಡಳಿತ ಮಂಡಳಿ ಅದ್ಧೂರಿ ಸ್ವಾಗತ ಕೋರಿದೆ. ಜೊತೆಗೆ ಜಿಲ್ಲಾ ಪೊಲೀಸ್ ಇಲಾಖೆಯಿಂದಲೂ ನ್ಯಾಯಮೂರ್ತಿಗಳಿಗೆ ಗೌರವ ಸಲ್ಲಿಸಲಾಯಿತು.
ನ್ಯಾಯಮೂರ್ತಿಗಳು ಶಾರದಾಂಬೆಯ ದರ್ಶನ ಪಡೆದಿದ್ದು, ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ನ್ಯಾಯಮೂರ್ತಿ ಜೊತೆ ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿ ಶ್ರೀಕೃಷ್ಣ, ಕರ್ನಾಟಕ ಹೈಕೋರ್ಟ್ ರಿಜಿಸ್ಟ್ರಾರ್ ಹಾಗೂ ಚಿಕ್ಕಮಗಳೂರು ಜಿಲ್ಲಾ ನ್ಯಾಯಾಧೀಶರು ಕೂಡಾ ಇದ್ದರು.
ಇಂದು ರಾತ್ರಿ ಮಠದಲ್ಲೇ ವಾಸ್ತವ್ಯ ಹೂಡಲಿರುವ ನ್ಯಾಯಮೂರ್ತಿಗಳು, ನಾಳೆ ಬೆಳಗ್ಗೆ 8 ಗಂಟೆಗೆ ಮಂಗಳೂರಿಗೆ ತೆರಳಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಮಂಗಳೂರಿನಿಂದ ದೆಹಲಿಗೆ ವಿಮಾನದ ಮೂಲಕ ಪ್ರಯಾಣ ಬೆಳೆಸಲಿದ್ದಾರೆ.