ಚಿಕ್ಕಮಗಳೂರು: ಹೊನ್ನಾಳಿ ಶಾಸಕ ಎಂ ಪಿ ರೇಣುಕಾಚಾರ್ಯ ಸಹೋದರನ ಮಗ ಚಂದ್ರು ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯ, ಕೊಪ್ಪ ತಾಲೂಕಿನ ಗೌರಿಗದ್ದೆಯಲ್ಲಿರುವ ವಿನಯ ಗುರೂಜಿ ಅವರನ್ನು ಚನ್ನಗಿರಿ ಪೊಲೀಸರು ಭೇಟಿಯಾಗಿ ಇಂಚಿಂಚೂ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಗೌರಿಗದ್ದೆಯ ಆಶ್ರಮಕ್ಕೆ ಚಂದ್ರು ಭೇಟಿ ನೀಡಿರುವ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ ಎನ್ನಲಾಗ್ತಿದೆ.
ಗೌರಿಗದ್ದೆ ಆಶ್ರಮಕ್ಕೆ ಭೇಟಿ ನೀಡಿದ ಪೊಲೀಸರ ತಂಡ ಚಂದ್ರು ಯಾವ ವಿಚಾರವನ್ನು ನಿಮ್ಮ ಜೊತೆ ಮಾತನಾಡಿದರು? ಭೇಟಿ ವೇಳೆ ಏನಾದ್ರೂ ಸಮಸ್ಯೆಯನ್ನು ನಿಮ್ಮೊಂದಿಗೆ ಹೇಳಿಕೊಂಡಿದ್ರಾ? ಚಂದ್ರು, ಕಿರಣ್ ಹಾಗೂ ನಿಮ್ಮ ಮಧ್ಯೆ ಏನಾದರೂ ಚರ್ಚೆ ನಡೆಯಿತಾ ಎಂದು ವಿನಯ್ ಗುರೂಜಿ ಬಳಿ ಪೊಲೀಸರು ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ಹೇಳಲಾಗ್ತಿದೆ.
ಚಂದ್ರು ಆಶ್ರಮದ ಭಕ್ತ, ಪ್ರತಿ ಬಾರಿಯಂತೆ ಈ ಬಾರಿಯೂ ಬಂದು ಹೋಗಿದ್ದಾನೆ. ತಡವಾಗಿ ಬಂದಿದ್ದರಿಂದ ಆತನ ಬಳಿ ಹೆಚ್ಚೇನೂ ನಾನು ಮಾತನಾಡಿಲ್ಲ. ತಡವಾಗಿ ಬಂದಿದ್ದಕ್ಕೆ ಇದು ಆಶ್ರಮಕ್ಕೆ ಭೇಟಿ ನೀಡುವ ಸಮಯವಾ ಎಂದು ಕೇಳಿದ್ದೆ. ಬೇಗ ಹೋಗಿ, ಜಾಗೃತೆಯಿಂದ ಹೋಗಿ ಎಂದು ಇಬ್ಬರನ್ನು ಕಳುಹಿಸಿಕೊಟ್ಟಿದ್ದೇನೆ. ಆ ಬಳಿಕ ನಡೆದ ಘಟನೆ ಬಗ್ಗೆ ನನಗೆ ನೋವಿದೆ ಎಂದು ಗುರೂಜಿ ಹೇಳಿದ್ದಾರೆ.
ಬಳಿಕ ಆಶ್ರಮದ ಸಿಬ್ಬಂದಿ ಜೊತೆಯೂ ಮಾತನಾಡಿ, ಈ ಕುರಿತು ಪೊಲೀಸರು ಮಾಹಿತಿಯನ್ನು ಸಂಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಚಂದ್ರು ಕೊಲೆ ಪ್ರಕರಣ: ಒಂದು ಕಾರು, ಒಂದು ಮೃತ ದೇಹದ ಸುತ್ತ ನೂರಾರು ಪ್ರಶ್ನೆಗಳು..