ಚಿಕ್ಕಮಗಳೂರು: ಕಳೆದೆರಡು ದಿನಗಳ ಹಿಂದೆ ನೇತ್ರಾವತಿ ನದಿಯ ಸೇತುವೆ ಮೇಲಿಂದ ನಾಪತ್ತೆಯಾಗಿದ್ದ ಖ್ಯಾತ ಕಾಫಿ ಉದ್ಯಮಿ, ಕೆಫೆ ಕಾಫಿ ಡೇ ಸಂಸ್ಥಾಪಕ ವಿ.ಜಿ.ಸಿದ್ಧಾರ್ಥ್ ಅವರ ಅಂತ್ಯಕ್ರಿಯೆ ಹುಟ್ಟೂರು ಚೇತನಹಳ್ಳಿಯ ಎಸ್ಟೇಟ್‌ನಲ್ಲಿ ಒಕ್ಕಲಿಗ ಸಂಪ್ರದಾಯದಂತೆ ನಡೆಯಿತು.
ಅಂತ್ಯಕ್ರಿಯೆ ವೇಳೆ ಅನೇಕ ರಾಜಕೀಯ ಮುಖಂಡರು, ಕಾಫಿ ಡೇ ಉದ್ಯಮಿಗಳು, ಗ್ರಾಮಸ್ಥರು ಸೇರಿದಂತೆ ಅನೇಕರು ಅವರಿಗೆ ಕಣ್ಣೀರಿನ ವಿದಾಯ ಹೇಳಿದರು. ಸಿದ್ಧಾರ್ಥ್ ಅವರ ಪಾರ್ಥಿವ ಶರೀರಕ್ಕೆ ಅವರ ಇಬ್ಬರು ಪುತ್ರರು ಅಗ್ನಿಸ್ಪರ್ಶ ಮಾಡಿದರು. ಸಾವಿರಾರು ಮಂದಿ ಅಭಿಮಾನಿಗಳ ಕಣ್ಣೀರ ವಿದಾಯದೊಂದಿಗೆ ಸಿದ್ಧಾರ್ಥ ಪಾರ್ಥಿವ ಶರೀರ ಪಂಚಭೂತಗಳಲ್ಲಿ ಲೀನವಾಯಿತು.
ಸೋಮವಾರ ರಾತ್ರಿ 6.30ರಿಂದ 7.30ರ ಅಂತರದಲ್ಲಿ ಸಿದ್ದಾರ್ಥ್ ಅವರು ಉಳ್ಳಾಲ ಸೇತುವೆಯ ಮೇಲೆ ವಾಕಿಂಗ್ ಹೋಗುವ ವೇಳೆ ಏಕಾಏಕಿ ನಾಪತ್ತೆಯಾಗಿದ್ದರು. ಕಾರಿನ ಚಾಲಕ ನೀಡಿದ ಮಾಹಿತಿ ಆಧಾರದಲ್ಲಿ ಸೋಮವಾರ ರಾತ್ರಿ 9 ಗಂಟೆಯಿಂದ ನದಿ, ಸಮುದ್ರ ಕಿನಾರೆಯಲ್ಲಿ ಶೋಧ ಕಾರ್ಯಾಚರಣೆ ಆರಂಭಗೊಂಡಿತು. ಸುಮಾರು 33 ಗಂಟೆಗಳ ಶೋಧ ಕಾರ್ಯಾಚರಣೆ ಬಳಿಕ ಸಿದ್ದಾರ್ಥ ಅವರ ಮೃತದೇಹ ಇಂದು ಬೆಳಗ್ಗೆ ಪತ್ತೆಯಾಗಿತ್ತು.
50,000ಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಒದಗಿಸಿ, ಲಕ್ಷಾಂತರ ಕುಟುಂಬಗಳಿಗೆ ಆಸರೆಯಾದ ಕಾಫಿ ಉದ್ಯಮಿ ಸಿದ್ಧಾರ್ಥ, ಇತ್ತೀಚಿನ ದಿನಗಳಲ್ಲಿ ಉದ್ಯಮದ ಸಂಕಷ್ಟಗಳಿಂದ ತೀವ್ರ ನೊಂದಿದ್ದರು ಎನ್ನಲಾಗಿದೆ. ಸಂಸ್ಥೆಯ ನಿರ್ದೇಶಕ ಮಂಡಳಿಗೆ ಇದೇ ವಿಷಯವಾಗಿವ ಅವರು ಪತ್ರ ಸಹ ಬರೆದಿದ್ದರು.
ಇನ್ನು ಚಿಕ್ಕಮಗಳೂರಿನಲ್ಲಿ ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಹೆಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ಹಿರಿಯ ಮುಖಂಡ ಆರ್. ಅಶೋಕ್, ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಸೇರಿದಂತೆ ಅನೇಕರು ಅವರ ಅಂತಿಮ ದರ್ಶನ ಪಡೆದರು.