ಚಿಕ್ಕಮಗಳೂರು: ವೈಶಿಷ್ಟಪೂರ್ಣ ಇತಿಹಾಸವುಳ್ಳ ಅಮೃತ್ ಮಹಲ್ ರಾಸು ತಳಿಯ ಸಂವರ್ಧನೆ ಹಾಗೂ ಸಂರಕ್ಷಣೆ ಮಾಡುವುದು ಸರ್ಕಾರದ ಆದ್ಯ ಕರ್ತವ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಚಿಕ್ಕಮಗಳೂರಿನಲ್ಲಿ ಹೇಳಿದರು.
ತರೀಕೆರೆ ತಾಲೂಕಿನ ಅಜ್ಜಂಪುರದ ಅಮೃತ್ ತಳಿಯ ಸಂವರ್ಧನ ಕೇಂದ್ರಕ್ಕೆ ಭೇಟಿ ಮಾಡಿ, ಅಲ್ಲಿ ದಾಸ್ತಾನು ಸಂಗ್ರಹಣೆ ಕೊಠಡಿ, ಮೇವು ಸಂಗ್ರಹಗಾರ, ದನಕರುಗಳು ಮೇಯುವ ಕಾವಲು, ಹಸಿ ಮೇವಿನ ಬೆಳೆ, ಅಮೃತ್ ಮಹಲ್ ರಾಸುಗಳ ಕೊಟ್ಟಿಗೆ, ಹಾಗೂ ಹಳೆ ಯಂತ್ರೋಪಕರಣಗಳ, ಕೊಠಡಿಗಳನ್ನು ಖುದ್ದು ಪರಿಶೀಲನೆ ಮಾಡಿದರು.
ವಿಶ್ವ ಪ್ರಸಿದ್ಧ ಅಮೃತ್ ಮಹಲ್ ರಾಸುಗಳು ಅತ್ಯುತ್ತಮ ಮೈಕಟ್ಟು, ಅತ್ಯಂತ ಸೂಕ್ಷ್ಮ ಮತಿ, ಹೆಚ್ಚು ರೋಗ ನಿರೋಧಕ ಶಕ್ತಿ ಹಾಗೂ ಹೆಚ್ಚು ಕಾರ್ಯ ನಿರ್ವಹಿಸುವ ಅಪರೂಪದ ತಳಿಯಾಗಿದ್ದು, ಅವುಗಳ ಸಂರಕ್ಷಣೆ ಹಾಗೂ ಸಂವರ್ಧನೆ ಮಾಡುವುದರೊಂದಿಗೆ ಮುಂದಿನ ಪೀಳಿಗೆಗೆ ಉಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಈ ಅಮೃತ್ ಮಹಲ್ ತಳಿ ಸಂವರ್ಧನ ಕೇಂದ್ರದ ಸಮಸ್ಯೆಗಳು ಸೇರಿದಂತೆ ಇಲ್ಲಿನ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳುವ ಮಾಹಿತಿಗಳನ್ನು ಮುಚ್ಚಿಡದೆ ಇಲ್ಲಿನ ಸಮಗ್ರ ಕಾಯಕಲ್ಪ ಕೈಗೊಳ್ಳಲು ವರದಿಯನ್ನು ನೀಡಬೇಕು ಎಂದೂ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಾವಲಿನಲ್ಲಿರುವ ಅನುಪಯುಕ್ತ ಜಾಲಿಗಿಡ ತೆರವುಗೊಳಿಸಿ, ರಾಸುಗಳಿಗೆ ಅಗತ್ಯವಿರುವ ಮೇವುಗಳನ್ನು ಬೆಳೆಯಬೇಕು. ಈಗಾಗಲೇ ಶಿಥಿಲಗೊಂಡಿರುವ ಹಳೆಯ ಕಟ್ಟಡಗಳನ್ನು ತೆರವುಗೊಳಿಸಿ, ಈ ಕೇಂದ್ರದ ಅಧೀನದಲ್ಲಿರುವ ಇತರ ಅಮೃತ್ ಮಹಲ್ ಕಾವಲಿನ ಭೂಮಿಯನ್ನು ಒತ್ತುವರಿ ಮಾಡಿರುವ ಬಗ್ಗೆ ಕೇಳಿ ಬರುತ್ತಿದ್ದು, ಇವುಗಳನ್ನು ಕಾನೂನಾತ್ಮಕವಾಗಿ ವಶಪಡಿಸಿಕೊಳ್ಳಬೇಕು. ಈ ಭಾಗದ ಸಮಸ್ಯೆಗಳನ್ನು ಮುಂದಿನ ದಿನಗಳಲ್ಲಿ ನಡೆಯುವ ಜನ ಸಂಪರ್ಕ ಸಭೆಯಲ್ಲಿ ಪರಿಹರಿಸಲು ಮುಂದಾಗುವುದಾಗಿ ಹೇಳಿದರು.
ಪ್ರಾಕೃತಿಕವಾಗಿ ಇಲ್ಲಿನ ರಾಸುಗಳು ಬೆಳೆಯುತ್ತಿದ್ದು, ಅವುಗಳ ಕೊಟ್ಟಿಗೆಗಳನ್ನು ಶುದ್ಧವಾಗಿ ನೋಡಿಕೊಳ್ಳುವುದರ ಜೊತೆಗೆ ಪೌಷ್ಠಿಕ ಹಾಗೂ ಸಮತೋಲನ ಆಹಾರ ಹಾಗೂ ಮೇವುಗಳನ್ನು ಒದಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೆಲ ಸ್ಥಳೀಯರು ಸಚಿವರ ಜೊತೆ ಈ ಕುರಿತು ಚರ್ಚೆ ಮಾಡಿದ್ದು, ಅಮೃತ್ ಮಹಲ್ ಪುನಶ್ಚೇತನಕ್ಕೆ ಪ್ರತ್ಯೇಕ ಪ್ರಾಧಿಕಾರ ರಚಿಸಿ ಐಎಎಸ್ ಅಧಿಕಾರಿಗಳನ್ನು ನೇಮಿಸಬೇಕು. ಖಾಯಂ ನೌಕರರನ್ನು ಹಾಗೂ ಪಶು ಚಿಕಿತ್ಸಾ ತರಬೇತಿ ಕೇಂದ್ರ ತೆರೆಯುವಂತೆ ಸಚಿವ ಸಿ ಟಿ ರವಿ ಅವರ ಬಳಿ ಮನವಿ ಮಾಡಿದರು.