ಚಿಕ್ಕಮಗಳೂರು: ಕರಾವಳಿಯಲ್ಲಿ ಆರಂಭವಾದ ಮುಸಲ್ಮಾನರೊಂದಿಗಿನ ವ್ಯಾಪಾರ, ವಹಿವಾಟುಗಳ ನಿಷೇಧದ ಕುರಿತ ಹೋರಾಟದ ಅಭಿಯಾನ ಮಲೆನಾಡಿನಲ್ಲೂ ದಿನದಿಂದ ದಿನಕ್ಕೆ ಕಾವು ಪಡೆಯುತ್ತಿದೆ. ರಾಜ್ಯದಲ್ಲಿ ಮುಸಲ್ಮಾನರು ಹಿಜಾಬ್ ತೀರ್ಪು ವಿರೋಧಿಸಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಪ್ರತಿಭಟಿಸುವ ಮೂಲಕ ಸಂವಿಧಾನವನ್ನು ವಿರೋಧಿಸಿದ ಹಿನ್ನೆಲೆಯಲ್ಲಿ ಹಿಂದೂ ಸಂಪ್ರದಾಯ, ಆಚರಣೆಗಳಂತೆ ನಡೆಯುವ ಜಾತ್ರೆಯಲ್ಲಿ ಅಂಗಡಿ ಮಳಿಗೆಗೆ ಅವಕಾಶ ನೀಡಬಾರದೆಂದು ಫ್ಲೆಕ್ಸ್ , ಬ್ಯಾನರ್ ಹಾಕುವ ಮೂಲಕ ಚಿಕ್ಕಮಗಳೂರಿನಲ್ಲೂ ಹೋರಾಟ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದಾರೆ.
ಮುಸ್ಲಿಮರಿಗೆ ಅವಕಾಶವಿಲ್ಲ : ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆಯುವ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ನಿಷೇಧ ಹೇರುವ ಕೂಗು ಜೋರಾಗುತ್ತಿದೆ. ಶೃಂಗೇರಿಯಿಂದ ಈಗ ಮೂಡಿಗೆರೆ ತಾಲೂಕಿನಲ್ಲಿ ನಿಷೇಧ ಕೂಗು ಕೇಳಿ ಬಂದಿದೆ. ಮೂಡಿಗೆರೆಯ ಗೋಣಿಬೀಡು ಗ್ರಾಮದ ಆದಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ಅವಕಾಶವಿಲ್ಲ ಎಂದು ಬ್ಯಾನರ್ ಹಾಕಿದ್ದಾರೆ.
ಆದಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ವಾರ್ಷಿಕ ಜಾತ್ರಾ ಮಹೋತ್ಸವ ನಿಮಿತ್ತ ರಥೋತ್ಸವ ನಡೆಯಲಿದೆ. ಮಲೆನಾಡಿನ ಪ್ರಸಿದ್ಧ ದೇವಾಲಯ ಗಳಲ್ಲಿ ಒಂದಾಗಿರುವ ಹಿನ್ನೆಲೆ ಸಾವಿರಾರು ಜನ ಸೇರುವ ನಿರೀಕ್ಷೆಯಿದ್ದು, ಇಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ಅವಕಾಶ ನೀಡಬಾರದು ಎಂದು ಈಗಾಗಲೇ ಸ್ಥಳೀಯರು ಆಡಳಿತ ಮಂಡಳಿಗೆ ಮನವಿ ನೀಡಿದ್ದರು. ಇದರ ಬೆನ್ನಲ್ಲೇ ಈಗ ಹಿಂದೂ ಪರ ಬಾಂಧವರ ಹೆಸರಿನಲ್ಲಿ ದೇವಸ್ಥಾನ ಮುಂಭಾಗ ಬ್ಯಾನರ್ ಹಾಕಿ, ಮುಸ್ಲಿಂ ವ್ಯಾಪಾರಸ್ಥರಿಗೆ ಅವಕಾಶವಿಲ್ಲ ಎಂದು ಸಾರಿದ್ದಾರೆ.
ಇದನ್ನೂ ಓದಿ: ಚಿಕ್ಕಮಗಳೂರು: ಕಂದಕಕ್ಕೆ ಉರುಳಿದ ಖಾಸಗಿ ಬಸ್, ಐವರು ಪ್ರಯಾಣಿಕರು ಗಂಭೀರ