ಚಿಕ್ಕಮಗಳೂರು: ಹಾಸನ ಲೋಕಸಭಾ ಬಿಜೆಪಿ ಅಭ್ಯರ್ಥಿ ಎ ಮಂಜು ಪರ ಮತಯಾಚನೆ ಮಾಡಲು ಪಕ್ಷದ ರಾಜ್ಯಾಧ್ಯಕ್ಷ ಯಡ್ಡಿಯೂರಪ್ಪ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನಲ್ಲಿ ಬಿರುಸಿನ ಪ್ರಚಾರ ನಡೆಸಿದರು.
ಕಡೂರು ತಾಲೂಕಿನ ಎಪಿಎಂಸಿ ಆವರಣದಲ್ಲಿ ಚುನಾವಣಾ ಪ್ರಚಾರ ಸಭೆ ನಡೆಯುತ್ತಿದೆ. ಕಾರ್ಯಕ್ರಮಕ್ಕೆ ಯಡಿಯೂರಪ್ಪ ಅಗಮಿಸುತ್ತಿದ್ದಂತೆ ಕಾರ್ಯಕರ್ತರ ಜಯ ಘೋಷ ಮುಗಿಲು ಮುಟ್ಟುವಂತಿತ್ತು. ಈ ಬಾರಿ ಎ ಮಂಜು ಅವರನ್ನು ಗೆಲ್ಲಿಸುವುದರ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಿ ಎಂದು ಜನರಲ್ಲಿ ಮನವಿ ಮಾಡಿದರು.
ಕಾಶ್ಮೀರ ಸಮಸ್ಯೆಗೆ ಬಿಜೆಪಿಯಿಂದಲೇ ಪರಿಹಾರ ಎಂಬ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆ ವಿಚಾರ ಕುರಿತು ಬಿಎಸ್ವೈ ಪ್ರತಿಕ್ರಿಯಿಸಿದರು. ಭಾರತದ ಏಕತೆ, ಸಮಗ್ರತೆ ಅಖಂಡತೆ ಕಾಪಾಡಬೇಕು ಅಂದರೇ ನರೇಂದ್ರ ಮೋದಿ ಪ್ರಧಾನಿ ಆಗಬೇಕು ಎಂಬುದು ಜಗತ್ತಿನ ಅಪೇಕ್ಷೆ. ವಿಶ್ವದಲ್ಲಿ ಭಾರತ ಮುಂದುವರಿದ ರಾಷ್ಟ್ರ ಆಗಬೇಕು ಎಂಬ ಸಂಕಲ್ಪವನ್ನು ಮೋದಿ ತೊಟ್ಟಿದ್ದಾರೆ. ಹಾಗಾಗಿ ಇಡೀ ದೇಶವೇ ಮೋದಿ ಬೆನ್ನಿಗೆ ನಿಂತಿದೆ. ಭಾರತ ಆರ್ಥಿಕವಾಗಿ ಅಮೆರಿಕ, ಚೀನಾ ದೇಶಗಳನ್ನು ಮೀರಿಸಿ ಮುಂದೆ ಹೋಗುತ್ತಿದೆ. ಭಾರತ ಪ್ರಪಂಚದ ಮೂರನೇ ಅತಿದೊಡ್ಡ ಆರ್ಥಿಕ ರಾಷ್ಟ್ರವಾಗಬೇಕು ಎಂಬುದು ಮೋದಿ ಅವರ ಬಯಕೆಯಾಗಿದ್ದು, ಇದನ್ನು ಅವರು ಈಡೇರಿಸಲಿದ್ದಾರೆ ಎಂದು ಯಡಿಯೂರಪ್ಪ ಹೇಳಿದರು.
ಕಳೆದ ಮೂರು ದಿನಗಳ ಹಿಂದೆ ಎ ಮಂಜು ವಿರುದ್ಧ ಕಿಡಿಕಾರಿದ್ದ ಪ್ರಜ್ವಲ್ ರೇವಣ್ಣ ಅವರಿಗೆ ಕಡೂರಿನಲ್ಲಿ ತಿರುಗೇಟು ನೀಡಿದ ಬಿಎಸ್ವೈ, ಎ ಮಂಜು ನಾಳೆ ನಮ್ಮ ಮನೆ ಬಾಗಿಲಿಗೆ ಬರ್ತಾರೆ ಎಂಬ ಪ್ರಜ್ವಲ್ ಹೇಳಿಕೆಗೆ ಗರಂ ಆದರು. ನಿನ್ನೆ ಮೊನ್ನೆ ರಾಜಕಾರಣಕ್ಕೆ ಬಂದವರು ಹಗುರವಾಗಿ ಮಾತನಾಡುವುದನ್ನು ಬಿಡಬೇಕು. ಅಪ್ಪನ ಬಲದಿಂದ ಚುನಾವಣೆಗೆ ನಿಂತಿದ್ದೇನೆ ಎಂಬ ಭ್ರಮೆಯಲ್ಲಿ ಹಗುರವಾಗಿ ಮಾತನಾಡುವುದನ್ನು ಪ್ರಜ್ವಲ್ ಇನ್ನಾದರೂ ನಿಲ್ಲಿಸಲಿ. ಎ ಮಂಜು ಯಾರು ಎಂಬುದು ಜನರಿಗೆ ಗೊತ್ತಿದೆ. ಅವರು ಗೆದ್ದು ದಿಲ್ಲಿಗೆ ಹೋಗ್ತಾರೆ. ಪ್ರಜ್ವಲ್ ರೇವಣ್ಣ ಮನೆಗೆ ಹೋಗುತ್ತಾರೆ ಎಂದರು.
ಈ ಕಾರ್ಯಕ್ರಮದಲ್ಲಿ ಹಾಸನ ಶಾಸಕ ಪ್ರೀತಮ್ ಗೌಡ, ಕಡೂರು ಶಾಸಕ ಬೆಳ್ಳಿ ಪ್ರಕಾಶ್ ಸೇರಿದಂತೆ ಹಲವು ಬಿಜೆಪಿ ಮುಖಂಡರು ಭಾಗಿಯಾಗಿದ್ದರು.