ಚಿಕ್ಕಮಗಳೂರು: ಪಿಯು ಪರೀಕ್ಷೆಯ ವೇಳೆ ಮಂಗಳೂರಿನಲ್ಲಿ ಒಂದಿಬ್ಬರು ಹುಡುಗಿಯರು ಹಿಜಬ್ಗಾಗಿ ಪರೀಕ್ಷೆಯನ್ನೇ ಬಹಿಷ್ಕರಿಸಿದ್ದನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಟೀಕಿಸಿದ್ದಾರೆ. 99% ಜನ ಹೈಕೋರ್ಟ್ ಆದೇಶವನ್ನು ಪಾಲಿಸಿ ಸಮವಸ್ತ್ರ ಧರಿಸಿಕೊಂಡು ಬಂದು ಪರೀಕ್ಷೆ ಬರೆದಿದ್ದಾರೆ. 1% ಜನರು ಮಾತ್ರ ವಿವಾದವನ್ನು ಜೀವಂತವಾಗಿಡಲು ಮತ್ತೆ ಹಿಜಬ್ ಗಲಾಟೆ ಎಬ್ಬಿಸಿದ್ದಾರೆ ಎಂದರು.
ಹಿಜಬ್ ಬೇಕೆಂದು ಕೇಳುವ ಜನರು ನಾಟಕ ಮಾಡುತ್ತಿದ್ದಾರೆ. ಕ್ಯಾಮೆರಾ ಕಂಡರೆ ಸಾಕು ಅವರು ಈ ರೀತಿಯ ನಾಟಕ ಶುರು ಮಾಡುತ್ತಾರೆ. ಸಮಾಜದಲ್ಲಿ ಹೀರೋ, ಹೀರೋಯಿನ್ ಆಗಲು ಮುಂದಾಗಿದ್ದಾರೆ. ನಮಗೆ ಹಿಜಬ್ ದೊಡ್ಡದೋ, ಪರೀಕ್ಷೆ ದೊಡ್ಡದೋ. ಹಿಜಬ್ ಬೇಕೆಂದವರು ಪರೀಕ್ಷೆ ಬರೆದಿಲ್ಲ ಎಂದು ಹೇಳಿದರು.
99% ಜನ ಸರ್ಕಾರದ ನಿಲುವು, ಕೋರ್ಟ್ ತೀರ್ಪು ಒಪ್ಪಿಕೊಂಡಿದ್ದಾರೆ. ಅವರಿಗೆ ಸ್ವಾಗತ. ಇನ್ನು ಕೆಲವರು ಸಮಸ್ಯೆಯನ್ನು ಜೀವಂತವಾಗಿಡಲು ಷಡ್ಯಂತ್ರ ನಡೆಸಿದ್ದಾರೆ. 1983ರಿಂದ ಇಲ್ಲದ ಚಳವಳಿ ಈಗ ಏಕೆ ಶುರುವಾಗುತ್ತೆ?. ಇವತ್ತು ಹಿಜಬ್ ದೊಡ್ಡದು ಅಂತಾರೆ, ನಾಳೆ ಸಂವಿಧಾನವೇ ಬೇಡ ಷರಿಯತ್ ಬೇಕು ಅಂತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಪಿಎಸ್ಐ ನೇಮಕಾತಿ ಅಕ್ರಮ : ಆಡಿಯೋ ಬಗ್ಗೆ ತನಿಖೆಯಾಗಲಿದೆ ಎಂದ ಸಿಎಂ ಬೊಮ್ಮಾಯಿ