ಚಿಕ್ಕಮಗಳೂರು/ಬಾಗಲಕೋಟೆ: ರಾಜ್ಯದಲ್ಲಿ ಬಿಜೆಪಿ - ಜೆಡಿಎಸ್ ಇಬ್ಬರ ಸ್ಥಿತಿ ಹೇಳಲು ಹೆಸರಿಲ್ಲದಂತಾಗುತ್ತೆ. ಮುಂದಿನ ದಿನಗಳಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್ಸಿಗೆ ಯಾವುದೇ ನಷ್ಟವಿಲ್ಲ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.
ನಗರದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ - ಜೆಡಿಎಸ್ ಹೊಟ್ಟೆಕಿಚ್ಚಿನಿಂದ ಕೈ-ಕೈ ಹಿಸುಕಿಕೊಳ್ತಿವೆ. ಅವರಿಗೆ ತಮ್ಮ ಅಸ್ತಿತ್ವವೇ ಹೋಗುತ್ತೆ, ಕಾಂಗ್ರೆಸ್ ಮುಂದೆ ನಾವು ಏನು ಇರಲ್ಲ ಅನ್ನಿಸಿದೆ. ಯಾವುದೇ ಕೆಲಸ ಇಲ್ಲದ ಕಾರಣ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಅವರ ಮಾತುಗಳಲ್ಲಿ ಹುರುಳಿಲ್ಲ, ಕಾಂಗ್ರೆಸ್ ಸರ್ಕಾರಕ್ಕೆ ಅವರಿಂದ ಯಾವ ನಷ್ಟವೂ ಇಲ್ಲ. ಮುಂದಿನ ಲೋಕಸಭೆ ಚುನಾವಣೆಯಲ್ಲಿ 25 ಸ್ಥಾನ ಗೆದ್ದೇ ಗೆಲ್ಲುತ್ತೇವೆ ಎಂದು ಸವಾಲು ಹಾಕಿದರು.
ಗ್ಯಾರಂಟಿಯಿಂದ ಕಾಂಗ್ರೆಸ್ ಪೂರ್ಣ ಬಹುಮತದ ಸರ್ಕಾರ ಬಂದಿದೆ. ಕೊಟ್ಟ ಮಾತನ್ನು ಉಳಿಸಿಕೊಂಡು ಪಾರದರ್ಶಕ ಆಡಳಿತ ನೀಡುತ್ತಿದ್ದೇವೆ. ಬಿಜೆಪಿ - ಜೆಡಿಎಸ್ ಕಾಂಗ್ರೆಸ್ ಜನಪ್ರಿಯತೆ ಸಹಿಸಲು ಆಗುತ್ತಿಲ್ಲ. ಹೀಗಾಗಿ ಇಲ್ಲ-ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕಾವೇರಿ ನದಿ ನೀರು ವಿವಾದದ ಬಗ್ಗೆ ಮಾತನಾಡಿದ ಅವರು ರಾಜ್ಯದ ನೆಲ ಜಲ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ. ಆ ದೃಷ್ಟಿಯಿಂದ ಕರ್ನಾಟಕ ಸರ್ಕಾರ ಕಾವೇರಿ ನೀರು ಬಳಕೆ ಮಾಡುವುದು ನಮ್ಮ ಹಕ್ಕು. ನಮ್ಮ ರೈತರ ಅನುಕೂಲಕ್ಕಾಗಿ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ. ಕಾನೂನು ತಜ್ಞರು, ಹಿರಿಯರ ಜೊತೆ ನಿರಂತರ ಚರ್ಚೆ ನಡೆಯುತ್ತಿದೆ. ಸರ್ವ ಪಕ್ಷ ಸಭೆ ಕರೆದು ಕೂಡ ಚರ್ಚೆ ಮಾಡಲಾಗಿದೆ ಎಂದು ತಿಳಿಸಿದರು.
ಕಾವೇರಿ ನೀರು ವಿವಾದವನ್ನು ಕೇಂದ್ರದ ಗಮನಕ್ಕೆ ತಂದು ಸರ್ವೋಚ್ಛ ನ್ಯಾಯಾಲಯದಲ್ಲಿ ವಾದ ಮಂಡಿಸಲಿದ್ದೇವೆ. ನಮ್ಮ ರಾಜ್ಯಕ್ಕೆ ಆ ಭಾಗದ ರೈತರು, ಜನರಿಗೆ ಆನ್ಯಾಯವಾಗದಂತ ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವ ಈಶ್ವರ್ ಖಂಡ್ರೆ ಭರವಸೆ ನೀಡಿದರು.
ಕಾವೇರಿ ಪ್ರಾಧಿಕಾರ ಮಾಡಿದ್ದು ಬಿಜೆಪಿ ಸರ್ಕಾರದಲ್ಲಿ: ರಾಮಲಿಂಗಾ ರೆಡ್ಡಿ ರಾಜ್ಯದ ಬಿಜೆಪಿ ನಾಯಕರಿಗೆ ಪ್ರಧಾನಮಂತ್ರಿ ಅವರೊಂದಿಗೆ ಕಾವೇರಿ ನೀರಿನ ಸಮಸ್ಯೆ ಬಗ್ಗೆ ಬಿಜೆಪಿ ರಾಜ್ಯದ ನಾಯಕರು ಯಾರು ಮಾತನಾಡುವುದಿಲ್ಲ. 25 ಬಿಜೆಪಿ ಸಂಸದರಿದ್ದರೂ ರಾಜ್ಯದ ನೆಲ ಜಲ ಭಾಷೆ ಬಗ್ಗೆ ಹೋರಾಟ ಮಾಡುತ್ತಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಆರೋಪಿಸಿದರು.
ಬಾಗಲಕೋಟೆ ನಗರದ ಕಾರ್ಯಕ್ರಮವೊಂದಕ್ಕೆ ಆಗಮಿಸಿದ ವೇಳೆ ಮಾಧ್ಯಮ ಪತ್ರಿನಿಧಿಗಳೊಂದಿಗೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ದಲ್ಲಿ ಕಾವೇರಿ ನೀರು ಬಿಡುಗಡೆಗೆ ಸಂಬಂಧಿಸಿದಂತೆ ಸಮರ್ಥವಾಗಿ ವಾದ ಮಂಡಿಸಲಾಗಿದೆ. ಸುಪ್ರೀಂಕೋರ್ಟ್ ಗೆ ಹಾಗೂ ಪ್ರಾಧಿಕಾರಕ್ಕೆ ಬರಪರಿಸ್ಥಿತಿ, ನೀರು ಇಲ್ಲದ ಬಗ್ಗೆಯೂ ಮಾಹಿತಿ ಇದೆ. ಆದರೆ ಸಂಕಷ್ಟ ಕಾಲದಲ್ಲಿ ಕೇಂದ್ರ ಸರ್ಕಾರ ಸಂಕಷ್ಟ ಪರಿಹಾರ ಸೂತ್ರ ಮಾಡಬೇಕಿತ್ತು. ಕೇಂದ್ರದಲ್ಲಿ ಬಿಜೆಪಿ ಪಕ್ಷ ಕಳೆದ ಒಂಬತ್ತು ವರ್ಷಗಳಿಂದ ಆಡಳಿತ ಮಾಡುತ್ತಿದೆ. ಆದರೆ ಈ ಕಾವೇರಿ ನೀರಿನ ಸಮಸ್ಯೆಗೆ ಬಗ್ಗೆ ಸೂಕ್ತ ಪರಿಹಾರ ಮಾಡಿಲ್ಲ ಏಕೆ ಎಂದು ಸಚಿವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಜನರು ಯಾರೂ ಕೂಡ ರಾಜ್ಯ ಸರ್ಕಾರದ ವಿರುದ್ಧ ಮಾತನಾಡುತ್ತಿಲ್ಲ. ವಿರೋಧ ಪಕ್ಷದವರಿಗೆ ವಿರೋಧಿಸುವುದೇ ಕೆಲಸವಾಗಿದೆ. ಡ್ಯಾಮ್ ದಲ್ಲಿ ನೀರು ಇಲ್ಲ ಎಂಬುದು ಜನಕ್ಕೆ ಗೊತ್ತು. ಕಾವೇರಿ ನದಿಯಿಂದ 37 ಟಿಎಂಸಿ ನೀರು ಬಿಡುಗಡೆ ಮಾಡಿದ್ದೇವೆ. ಕಳೆದ ವರ್ಷ ವಿಪರೀತ ಮಳೆಯಾಗಿ 600 ಟಿಎಂಸಿ ನೀರು ಹರಿದು ಹೋಗಿತ್ತು. ಆದರೆ ಈಗ ಮಳೆ ಆಗಿಲ್ಲ. ಹೀಗಾಗಿ ಡ್ಯಾಮ್ದಲ್ಲಿ ನೀರು ಇಲ್ಲ. ಈ ಹಿನ್ನೆಲೆ ನೀರು ಬಿಡುಗಡೆ ಮಾಡುತ್ತಿಲ್ಲ. ಮಾಮೂಲಿಯಂತೆ 3500 ಕ್ಯೂಸೆಕ್ ನೀರು ಸದಾ ಹರಿದು ಹೋಗುತ್ತಿರುತ್ತದೆ ಎಂದು ಹೇಳಿದರು.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮಾಡಿದ್ದು ಯಾರು? ಅದನ್ನು ಬಿಜೆಪಿಯವರು ಎಂದ ಸಚಿವರು, ಕಾವೇರಿ ವಿವಾದವನ್ನು ಕೇಂದ್ರ ಸರ್ಕಾರ ಸಂಕಷ್ಟ ಸೂತ್ರದ ಮೂಲಕ ಪರಿಹಾರ ಮಾಡಬೇಕಾಗಿದೆ. ಇಷ್ಟೆಲ್ಲಾ ಮಾತನಾಡುವ ಬಿಜೆಪಿ ನಾಯಕರು, ಪ್ರಧಾನ ಮಂತ್ರಿಗೆ ನಾಲ್ಕು ರಾಜ್ಯದ ಮುಖ್ಯಮಂತ್ರಿಗಳನ್ನು ಕರೆದು ಸಭೆ ಮಾಡುವ ಮೂಲಕ ಈ ಸಮಸ್ಯೆ ಪರಿಹರಿಸುವಂತೆ ಸಲಹೆ ನೀಡಬಹುದಿತ್ತು ಎಂದು ಹೇಳಿದರು.
ಇದನ್ನೂಓದಿ:ಬಿಜೆಪಿ- ಜೆಡಿಎಸ್ ಮೈತ್ರಿ ಕುರಿತು ಆಯನೂರು ಮಂಜುನಾಥ್ ವ್ಯಂಗ್ಯ