ಚಿಕ್ಕಮಗಳೂರು: ಜಿಲ್ಲೆಯಲ್ಲಿರುವ ಭದ್ರಾ ನದಿ ಅಪಾಯದ ಮಟ್ಟ ಮೀರಿ ಹರಿಯುಯುವ ಎಲ್ಲಾ ಲಕ್ಷಣಗಳು ಗೋಚರವಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗ ಹಾಗೂ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಉತ್ತಮ ಹಾಗೂ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆ ಭದ್ರೆ ತುಂಬಿ ಹರಿಯುತ್ತಿದ್ದು, ಕಳಸದ ಬಳಿ ಇರುವ ಹೆಬ್ಬಾಳೆ ಸೇತುವೆ ಮುಳುಗುವ ಹಂತಕ್ಕೆ ತಲುಪಿದೆ.
ಕಳೆದ ವರ್ಷ ನಿರಂತರವಾಗಿ ಸುರಿದ ಧಾರಾಕಾರ ಮಳೆಯಿಂದಾಗಿ 14ಕ್ಕೂ ಹೆಚ್ಚು ಬಾರಿ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿತ್ತು. ಸೇತುವೆ ಮುಳುಗಡೆಗೆ ಕೆಲವೇ ಅಡಿ ಬಾಕಿ ಇದ್ದು, ಸೇತುವೆ ಮುಳುಗಿದರೆ ಕಳಸ - ಹೊರನಾಡು ಸಂಪರ್ಕ ಕಡಿತವಾಗಲಿದೆ. ಕುದುರೆಮುಖ, ಶೃಂಗೇರಿ, ಕೊಪ್ಪ ಸುತ್ತಮುತ್ತ ಧಾರಾಕಾರ ಮಳೆ ಆಗುತ್ತಿರುವ ಪರಿಣಾಮ ನದಿಗಳ ನೀರಿನ ಮಟ್ಟ ಅಧಿಕವಾಗುತ್ತಿದೆ.