ಚಿಕ್ಕಮಗಳೂರು : ನಮ್ಮ ದೇಶದ ಎಲ್ಲಾ ಕಾನೂನುಗಳು ಸಂವಿಧಾನದ ಅಡಿಯಲ್ಲಿದ್ದು, ಅದರಲ್ಲಿನ ಹಕ್ಕು ಮತ್ತು ಕರ್ತವ್ಯಗಳನ್ನು ಪ್ರತಿಯೊಬ್ಬ ನಾಗರಿಕರು ಪಾಲನೆ ಮಾಡಿದಾಗ ಮಾತ್ರ ಪ್ರಜಾಪ್ರಭುತ್ವಕ್ಕೆ ಯಶಸ್ಸು ಸಿಗಲಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಸವರಾಜ್ ಚೇಂಗಟಿ ಹೇಳಿದ್ದಾರೆ.
ಅಂಬಳೆ ಗ್ರಾಮದ ಗ್ರಂಥಾಲಯ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು ಇವರ ಸಂಯುಕ್ತಾಶ್ರಯದಲ್ಲಿ ಸಂವಿಧಾನ ದಿನಾಚರಣೆ ಮತ್ತು ಭಾರತ ಸಂವಿಧಾನದ 70 ನೇ ವರ್ಷಾಚರಣೆ ಅಂಗವಾಗಿ ಆಯೋಜಿಸಿದ್ದ ಸಂವಿಧಾನದ ಮೂಲಭೂತ ಕರ್ತವ್ಯ ಹಾಗೂ ಜಾಗೃತಿ ಅಭಿಯಾನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತವು ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಸಂವಿಧಾನವು ಲಿಖಿತ ಮಾದರಿಯನ್ನು ಹೊಂದಿದೆ. ಅದರಲ್ಲಿ ನ್ಯಾಯ, ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಸೇರಿದಂತೆ ಹಲವು ಮಹತ್ತರ ವಿಷಯಗಳನ್ನು ಒಳಗೊಂಡು ಇತರೆ ರಾಷ್ಟ್ರಗಳಿಗೆ ಮಾದರಿಯಾಗಿದೆ. ಸರ್ವರಿಗೂ ಸಮಾನತೆ ಎಂಬ ಧ್ಯೇಯೊದ್ದೇಶದಂತೆ ಸಂವಿಧಾನವು ಪ್ರತಿಯೊಬ್ಬ ನಾಗರಿಕರಿಗೆ ಹಕ್ಕು ಮತ್ತು ಕರ್ತವ್ಯಗಳನ್ನು ನೀಡಿದೆ. ಇವೆರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಎಲ್ಲಾ ನಾಗರಿಕರು ಹಕ್ಕುಗಳನ್ನು ಅನುಭವಿಸುವಂತೆ ಕರ್ತವ್ಯಗಳನ್ನು ತಪ್ಪದೇ ಪಾಲನೆ ಮಾಡಿದಾಗ ದೇಶ ಪ್ರಗತಿಪಥದತ್ತ ಸಾಗಲಿದೆ.
ಸುಪ್ರಿಂ ಕೋರ್ಟ್ ನಿರ್ದೇಶನದಂತೆ ಎಲ್ಲಾ ಗ್ರಾಮ ಪಂಚಾಯಿತಿ ಹಾಗೂ ಶಾಲಾ ಕಾಲೇಜುಗಳಲ್ಲಿ ಸಂವಿಧಾನದ ಕುರಿತು ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಇದರ ಮುಖ್ಯ ಉದ್ದೇಶ ಸಾರ್ವಜನಿಕರು, ವಿದ್ಯಾರ್ಥಿಗಳಲ್ಲಿ ಸಂವಿಧಾನದ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಪ್ರಸ್ತಾವನೆಯ ಮಹತ್ವದ ಕುರಿತು ಅರಿವು ಮೂಡಿಸುವುದಾಗಿದೆ ಎಂದು ಹೇಳಿದರು.