ಚಿಕ್ಕಮಗಳೂರು: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಂಡುಬರುತ್ತಿರುವ ಹಿನ್ನೆಲೆ, ಜಿಲ್ಲೆಯಲ್ಲಿ ಶೀಘ್ರವಾಗಿ ಕೋವಿಡ್ -19 ಪ್ರಯೋಗಾಲಯ ತೆರೆಯಬೇಕೆಂದು ಜಿಲ್ಲಾ ಯುವ ಜನತಾದಳ ಕಾರ್ಯಕರ್ತರು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಅವರಿಗೆ ಮನವಿ ಸಲ್ಲಿಸಿದರು.
ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದಕ್ಕೆ ಪ್ರಮುಖ ಕಾರಣ ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷಾ ಕೇಂದ್ರ ಇಲ್ಲದೇ ಇರುವುದಾಗಿದೆ. ಕೊರೊನಾ ಟೆಸ್ಟ್ ಗೆ ಒಳಪಡಿಸಿದವರ ಪರೀಕ್ಷಾ ವರದಿ ಬರಲು ಒಂದು ವಾರ ಕಾಲ ಬೇಕಾಗುತ್ತಿದೆ. ಕೋವಿಡ್ ವರದಿ ಶಿವಮೊಗ್ಗ, ಹಾಸನ, ಮೈಸೂರು ಜಿಲ್ಲೆಯಿಂದ ಬರಬೇಕಾಗಿರುವುದರಿಂದ ಸೋಂಕಿತರನ್ನು ಪತ್ತೆಹಚ್ಚುವುದು ತಡವಾಗುತ್ತಿದೆ. ಇದರಿಂದ ಸೋಂಕಿತರು ಸಾರ್ವಜನಿಕವಾಗಿ ಸಂಚಾರ ಮಾಡುತ್ತಿರುವ ಹಿನ್ನೆಲೆ, ಸೋಂಕಿತರ ಸಂಖ್ಯೆಯಲ್ಲಿ ಮತ್ತಷ್ಟು ಏರಿಕೆಯಾಗುತ್ತಿದೆ.
ಜಿಲ್ಲೆಯಲ್ಲಿಯೇ ಕೋವಿಡ್ ಪರೀಕ್ಷಾ ವರದಿ ಕೇಂದ್ರ ಪ್ರಾರಂಭ ಮಾಡಿದರೆ ಜಿಲ್ಲೆಯ ಜನರಿಗೆ ಅನುಕೂಲವಾಗಲಿದೆ. ಹಾಗಾಗಿ ಕೂಡಲೇ ಈ ಕುರಿತು ಸರ್ಕಾರದ ಗಮನಕ್ಕೆ ತಂದು ಜಿಲ್ಲೆಯಲ್ಲಿ ಕೊರೊನಾ ಪರೀಕ್ಷಾ ವರದಿ ಕೇಂದ್ರ ಪ್ರಾರಂಭ ಮಾಡಬೇಕು ಎಂದು ಯುವ ಜನತಾದಳ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.