ಚಿಕ್ಕಮಗಳೂರು: ಕಾಂಗ್ರೆಸ್ ಇಂದು ನೈತಿಕ ರಾಜಕರಣದ ಪರಾಕಾಷ್ಠೆಯಲ್ಲಿದೆ. ಆದರೆ ಕಾರ್ಯಕರ್ತರು ಹಾಗೂ ಸಿದ್ಧಾಂತವೇ ನಮ್ಮ ಪಕ್ಷದ ಆಧಾರ ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಹೇಳಿದರು.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಬಿಟ್ಟು ಬೇರೆ ಪಾರ್ಟಿ ಸೇರಿದರೆ ಅನೈತಿಕ ರಾಜಕರಣ. ಆದರೆ ಕಾಂಗ್ರೆಸ್ ಪಾರ್ಟಿಗೆ ಯಾರೂ ಬೇಕಾದರು ಸೇರಬಹುದು. ನಾನು ಯಾರ ಮೇಲೂ ಬೇಹುಗಾರಿಗೆ ಮಾಡುತ್ತಿಲ್ಲ. ಕಾರ್ಯಕರ್ತರು ಹಾಗೂ ಸಿದ್ಧಾಂತವೇ ನಮ್ಮ ಪಕ್ಷದ ಆಧಾರ. ಕಾರ್ಯಕರ್ತರೇ ಮಾಲೀಕರು. ಎಂತಹ ಸಂದರ್ಭ ಬಂದರೂ ಎದುರಿಸುತ್ತೇವೆ. ಈ ಹಿಂದೆ ದೊಡ್ಡ ದೊಡ್ಡ ನಾಯಕರೇ ಪಾರ್ಟಿ ಬಿಟ್ಟು ಹೋದಾಗ ಎದುರಿಸಿದ್ದೇವೆ ಎಂದರು.
ಬಿಜೆಪಿ ಹಾಗೂ ಶಿವಸೇನೆ ಚುನಾವಣೆ ಪೂರ್ವ ಮೈತ್ರಿ ಮಾಡಿಕೊಂಡಿದ್ದವು. ದೇವೇಂದ್ರ ಫಡ್ನವಿಸ್ ನಾಯಕತ್ವದ ಮೇಲೆ ಚುನಾವಣೆ ಎದುರಿಸಿದ್ದೇವೆ. ಶಿವಸೇನೆ ಸಂಬಂಧ ಕಳೆದುಕೊಳ್ಳಬಾರದು ಎಂಬುದು ನಮ್ಮ ಭಾವನೆ. ಶಿವಸೇನೆ ಬಹುವರ್ಷದ ವೈಚಾರಿಕ ಮಿತ್ರ. ಅವರು ಟೀಕೆ ಮಾಡಿದಾಗಲೂ ನಾವು ಮಾಡಿಲ್ಲ. ಆದರೆ ಶಿವಸೇನೆ ತಮ್ಮ ಪಕ್ಷದವರೇ ಮುಖ್ಯಮಂತ್ರಿ ಆಗಬೇಕು ಎಂದು ನಮಗೆ ಬೆಂಬಲ ಘೋಷಣೆ ಮಾಡಿಲ್ಲ. ನಾವು ಅತಿ ದೊಡ್ಡ ಪಕ್ಷವಾದರೂ ನಮಗೆ ಬೆಂಬಲ ಇಲ್ಲ ಎಂದು ಫಡ್ನವಿಸ್ ಹೇಳಿದ್ದಾರೆ. ವೈಚಾರಿಕ ಸಂಬಂಧ ಇಟ್ಟುಕೊಳ್ಳಬೇಕೋ ಅಥವಾ ಬೇಡವೋ ಎಂಬುದು ಶಿವಸೇನೆಗೆ ಬಿಟ್ಟದ್ದು ಎಂದರು.