ಚಿಕ್ಕಮಗಳೂರು: ಕೊರೊನಾ ವೈರಸ್ ಭೀತಿಯಿಂದ ಲಾಕ್ಡೌನ್ ನಡೆಯುತ್ತಿರುವುದರ ನಡುವೆ, ಇತ್ತ ಜಿಲ್ಲೆಯಲ್ಲಿ ಕಳ್ಳಭಟ್ಟಿ ದಂಧೆ ಜೋರಾಗಿ ನಡೆಯುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಳ್ಳಬಟ್ಟಿ ದಂಧೆ ಹೆಚ್ಚಾಗುತ್ತಿದ್ದು, ಮೇಲಿಂದ ಮೇಲೆ ಕಳ್ಳಭಟ್ಟಿ ಅಡ್ಡೆ ಮೇಲೆ ಚಿಕ್ಕಮಗಳೂರು ಅಬಕಾರಿ ಪೊಲೀಸರು ರೇಡ್ ಮಾಡುತ್ತಿದ್ದಾರೆ.
ಕಳೆದ 15 ದಿನಗಳಲ್ಲಿ 45ಕ್ಕೂ ಹೆಚ್ಚು ಕೇಸ್ ದಾಖಲು ಮಾಡಲಾಗಿದ್ದು, ಈಗಾಗಲೇ ನೂರಾರು ಲೀಟರ್ ಕಳ್ಳಭಟ್ಟಿ ಸಾರಾಯಿ ವಶಕ್ಕೆ ಪಡೆದು ನಾಶ ಮಾಡಿದ್ದು, ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಮೂಡಿಗೆರೆ, ಚಿಕ್ಕಮಗಳೂರು, ಕೊಪ್ಪ, ಶೃಂಗೇರಿ ಭಾಗಗಳಲ್ಲಿ ದಂಧೆ ಹೆಚ್ಚಾಗಿ ನಡೆಯುತ್ತಿದೆ.
ಮಿತಿ ಮೀರಿದ ಕಳ್ಳಭಟ್ಟಿ ದಂಧೆಗೆ ಅಬಕಾರಿ ಪೊಲೀಸರು ಸುಸ್ತಾಗಿ ಹೋಗಿದ್ದು, ಕಳ್ಳ ಭಟ್ಟಿಗೆ ಬ್ಯಾಟರಿ ಶೆಲ್, ಯೂರಿಯಾ, ಅಮೋನಿಯಂ ಬಳಕೆ ಮಾಡಲಾಗುತ್ತಿದೆ. ಮಲೆನಾಡು ಭಾಗದಲ್ಲಿ ನಿತ್ಯವೂ ಅಬಕಾರಿ ಪೊಲೀಸರು ಈ ದಾಳಿಯನ್ನು ಮುಂದುವರೆಸಿದ್ದಾರೆ.