ಚಿಕ್ಕಮಗಳೂರು : ನಿತ್ಯ ಒಂದಲ್ಲಾ ಒಂದು ಚಮತ್ಕಾರಗಳು ಹಾಗೂ ವಿಸ್ಮಯಗಳು ಪ್ರಕೃತಿಯಲ್ಲಿ ನಡೆಯುತ್ತಿರುತ್ತವೆ. ಅದೇ ರೀತಿಯ ವಿಸ್ಮಯವೊಂದು ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದ್ದು, ದಟ್ಟ ಅರಣ್ಯದ ಮಧ್ಯೆ ಕೆಂಪು ಬಣ್ಣದ ಕಾಡೆಮ್ಮೆಯೊಂದು ಗೋಚರವಾಗಿ ಅಚ್ಚರಿ ಮೂಡಿಸಿದೆ.
ಜಿಲ್ಲೆಯ ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಮುತ್ತೋಡಿ ಅರಣ್ಯ ವಲಯದಲ್ಲಿ ಕೆಂಪು ಬಣ್ಣದ ಕಾಡೆಮ್ಮೆ ಕಾಣಿಸಿಕೊಂಡಿದ್ದು, ಸಾರ್ವಜನಿಕರಲ್ಲಿ ಹಾಗೂ ಪರಿಸರಾಸಕ್ತರಲ್ಲಿ ಕುತೂಹಲ ಮೂಡಿಸಿದೆ. ಸಾಮಾನ್ಯವಾಗಿ ಕಾಡೆಮ್ಮೆಗಳು ಕಪ್ಪು ಬಣ್ಣದಿಂದ ಕೂಡಿದ್ದು, ಅದರ ಕಾಲುಗಳು ಬಿಳಿ ಬಣ್ಣದಿಂದ ಕೂಡಿರುತ್ತವೆ. ಆದರೆ, ಅಪರೂಪಕ್ಕೆ ಕೆಂಪು ಬಣ್ಣದ ಕಾಡೆಮ್ಮೆ ಕಾಣಿಸಿಕೊಂಡು ನೋಡುಗರಲ್ಲಿ ವಿಸ್ಮಯ ಮೂಡಿಸಿದೆ.
ಸಾಮಾನ್ಯವಾಗಿ ಬಿಳಿ ಹುಲಿ, ಬಿಳಿ ಸಿಂಹ, ಕಪ್ಪು ಚಿರತೆ ಈ ರೀತಿಯ ಬಣ್ಣ ಬಣ್ಣದ ಪ್ರಾಣಿಗಳನ್ನು ನಾವು ಈಗಾಗಲೇ ನೋಡಿದ್ದೇವೆ. ಆದರೆ, ಕೆಂಪು ಬಣ್ಣದ ಕಾಡೆಮ್ಮೆ ಈ ಭಾಗದಲ್ಲಿ ಕಾಣಿಸಿಕೊಂಡಿರುವುದು ವಿಶೇಷ.
ಕೆಲ ತಜ್ಞರು ಹೇಳುವ ಪ್ರಕಾರ, ಮೆಲನಿನ್ ಎಂಬ ಅಂಶದ ಏರುಪೇರಿನಿಂದ ಪ್ರಾಣಿಯ ದೇಹದ ಬಣ್ಣ ಬದಲಾವಣೆ ಆಗುವುದು ಒಂದು ಸಹಜ ಪ್ರಕ್ರಿಯೆ. ಅದೇ ರೀತಿ ಈ ಕಾಡೆಮ್ಮೆಗೂ ಆಗಿರಬಹುದು. ಈ ಹಿಂದೆ ಮುತ್ತೋಡಿ ಅರಣ್ಯದ ಹಿಪ್ಲ ಅರಣ್ಯ ಭಾಗದಲ್ಲಿ ಅರಣ್ಯ ಸಿಬ್ಬಂದಿ ಕಣ್ಣಿಗೆ ಇದೇ ರೀತಿಯ ಕೆಂಪು ಬಣ್ಣದ ಕಾಡೆಮ್ಮೆ ಕಾಣಿಸಿಕೊಂಡಿತ್ತು. ಈಗ ಮತ್ತೊಮ್ಮೆ ಕೆಂಪು ಬಣ್ಣದ ಕಾಣಿಸಿಕೊಂಡಿರುವುದು ವಿಶೇಷ. ಈ ಕಾಡೆಮ್ಮೆ ಸುಮಾರು ಐದು ವರ್ಷ ವಯಸ್ಸಿನದಾಗಿರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.