ಚಾಮರಾಜನಗರ: ಇಂದು ಹೊಸದಾಗಿ ಜಿಲ್ಲೆಯಲ್ಲಿ 23 ಕೋವಿಡ್ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, ನಾಲ್ವರು ಮಕ್ಕಳು ಸೇರಿದಂತೆ 34 ಮಂದಿ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದಾರೆ.
ಜಿಲ್ಲೆಯಲ್ಲಿ ಇದೀಗ ಸಕ್ರಿಯ ಪ್ರಕರಣಗಳ ಸಂಖ್ಯೆ 201 ಆಗಿದ್ದು, 402 ಮಂದಿಯ ಮೇಲೆ ನಿಗಾ ಇರಿಸಲಾಗಿದೆ. ಇಂದು ಕೇವಲ ಆ್ಯಂಟಿಜೆನ್ ಕಿಟ್ ಬಳಸಿ ಪರೀಕ್ಷೆ ನಡೆಸಲಾಗಿದೆ. ಚಾಮರಾಜನಗರ ತಾಲೂಕಿನಲ್ಲಿ 14, ಕೊಳ್ಳೇಗಾಲ 3, ಯಳಂದೂರಿನಲ್ಲಿ 4 ಹಾಗೂ ಗುಂಡ್ಲುಪೇಟೆಯಲ್ಲಿ ಓರ್ವನಿಗೆ ಇಂದು ಸೋಂಕು ತಗುಲಿದೆ.
ಇಂದು ಬಿಡುಗಡೆಯಾದ 34 ಮಂದಿಯಲ್ಲಿ ಬೊಮ್ಮಲಾಪುರ ಗ್ರಾಮದ 13 ವರ್ಷದ ಬಾಲಕಿ, ದೇವನಹಳ್ಳಿ ಗ್ರಾಮದ 4 ವರ್ಷದ ಹೆಣ್ಣು, 11 ಹಾಗೂ 9 ವರ್ಷದ ಬಾಲಕರಿಬ್ಬರು ಗುಣಮುಖರಾಗಿ ಮನೆ ಸೇರುವ ಮೂಲಕ ಹಲವರಿಗೆ ಆತ್ಮಬಲ ತುಂಬಿದ್ದಾರೆ. ಆದರೆ ಇಂದು ಕೂಡ 2 ವರ್ಷದ ಮಗುವಿಗೆ ಕೊರೊನಾ ಸೋಂಕು ತಗುಲುವ ಮೂಲಕ 2 ವರ್ಷದ 3 ಮಕ್ಕಳು ಸೋಂಕಿಗೆ ತುತ್ತಾದಂತಾಗಿದೆ.