ಚಿಕ್ಕಬಳ್ಳಾಪುರ : ನಿಸರ್ಗದ ತಾಣ ನಂದಿಬೆಟ್ಟದಲ್ಲಿ ಪ್ರೇಮಿಗಳ ದಿನವೇ ನಂದಿ ಬೆಟ್ಟದ ಟಿಪ್ಪು ಡ್ರಾಪ್ ನಲ್ಲಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರೋ ಪ್ರಕರಣ ನಡೆದಿದೆ. ಮೃತದೇಹ ಮಂಗಳವಾರ ಸಂಜೆ ಪತ್ತೆಯಾಗಿದೆ. ಕಳೆದ ಮೂರು ದಿನಗಳ ಹಿಂದೆ ಅಂದರೆ ಶನಿವಾರದಂದು ವಿಶ್ವವಿಖ್ಯಾತ ನಂದಿಗಿರಿ ಧಾಮಕ್ಕೆ ಭೇಟಿ ನೀಡಿದ್ದ ಅರುಣ್ ಎಂಬಾತ ಟಿಪ್ಪು ಡ್ರಾಪ್ನಲ್ಲಿ ಆತ್ಮಹತ್ಯೆ ಶರಣಾದ ಯುವಕ. ಇನ್ನು, ಪ್ರಕರಣವನ್ನು ದಾಖಲಿಸಿಕೊಂಡಿದ್ದ ನಂದಿ ಗಿರಿಧಾಮ ಪೊಲೀಸ್ ಠಾಣೆಯ ಪೊಲೀಸರು ಮೃತ ದೇಹಕ್ಕಾಗಿ ಸಾಕಷ್ಟು ತನಿಖೆ ನಡೆಸಿದ್ದರು.
ಹೆಲ್ಮೆಟ್ ಲಾಕ್ ರೂಮ್ ಮಾಲೀಕರಿಂದ ಪೊಲೀಸರಿಗೆ ಮಾಹಿತಿ : ಮಂಡ್ಯ ಮೂಲದ ಮೃತ ಯುವಕ ಅರುಣ್ ತನ್ನ ಸ್ನೇಹಿತರ ಜೊತೆಗೆ ಶನಿವಾರ ನಂದಿ ಬೆಟ್ಟಕ್ಕೆ ಬಂದಿದ್ದ. ಬಳಿಕ ಅರುಣ್ ಬೈಕ್ ಅನ್ನು ಪಾರ್ಕಿಂಗ್ ಮಾಡಿ ನಂತರ ನಂದಿ ಬೆಟ್ಟದ ಮೇಲ್ಭಾಗಕ್ಕೆ ಹೋಗಿದ್ದಾನೆ. ಶನಿವಾರ ಬೆಟ್ಟದ ಮೇಲೆ ಹೋದವನು ಮರಳಿ ವಾಪಸ್ ಬರದ ಹಿನ್ನೆಲೆ ಶನಿವಾರ ಮತ್ತು ಭಾನುವಾರ ಎರಡು ದಿನಗಳವರೆಗೆ ಹೆಲ್ಮೆಟ್ ಲಾಕ್ ರೂಮ್ ಮಾಲೀಕರು ಕಾದಿದ್ದಾರೆ. ಬಳಿಕವೂ ಸೋಮವಾರ ಸಹ ಕಾದರೂ ಅರುಣ್ ವಾಪಸ್ ಬಾರದ ಹಿನ್ನೆಲೆ ಅನುಮಾನಗೊಂಡು ಹೆಲ್ಮೆಟ್ ಲಾಕ್ ರೂಮ್ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಪ್ರಜಾಕೀಯ ಬೆಂಬಲಿಸುವಂತೆ ಡೆತ್ ನೋಟ್ನಲ್ಲಿ ಮನವಿ : ಇನ್ನು, ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ನಡೆಸಿದಾಗ ಅರುಣ್ ಹೋಗಿರೋ ವಿಡಿಯೋ ಸಿಕ್ಕಿದ್ದು ವಾಪಸ್ ಬಂದಿರೋ ವಿಡಿಯೋ ಲಭ್ಯವಾಗಿಲ್ಲ. ಹೀಗಾಗಿ ಬೆಟ್ಟವೆಲ್ಲಾ ಸಿಬ್ಬಂದಿ ತನಿಖೆ ನಡೆಸಿದಾಗ ಟಿಪ್ಪು ಡ್ರಾಪ್ ಬಳಿ ಅರುಣ್ ಬ್ಯಾಗ್ ಪತ್ತೆಯಾಗಿದೆ. ಬ್ಯಾಗ್ ನಲ್ಲಿ ಡೆತ್ ನೋಟ್ ಸಹ ಪತ್ತೆಯಾಗಿದ್ದು, ಅದರಲ್ಲಿ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ 'ತಾನು ಸಂತೋಷವಾಗಿ ಸಾಯುತ್ತಿದ್ದೇನೆ, ರಾಜಕೀಯ ವ್ಯವಸ್ಥೆ ಸರಿ ಇಲ್ಲ ನಟ ಉಪೇಂದ್ರ ಅವರ ಪ್ರಜಾಕೀಯ ಪಕ್ಷದ ಸಿದ್ಧಾಂತಗಳನ್ನ ಜನ ಬೆಂಬಲಿಸಬೇಕು' ಎಂದು ಬರೆದಿಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಅರುಣ್ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಅಂಬರ ಹಳ್ಳಿ ಗ್ರಾಮದ ಮೂಲದ ಯುವಕ ಎಂದು ತಿಳಿದು ಬಂದಿದೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅರುಣ್ ಕೆಲಸ ನಿರ್ವಹಿಸುತ್ತಿದ್ದ. ಸದ್ಯ ಪ್ರಕರಣವನ್ನು ದಾಖಲಿಸಿಕೊಂಡಿದ್ದ ನಂದಿಗಿರಿಧಾಮ ಪೊಲೀಸರು ಮೃತದೇಹ ಪತ್ತೆ ಹಚ್ಚಿ, ಶವ ಪರೀಕ್ಷೆಗೆ ಜಿಲ್ಲಾ ಆಸ್ಪತ್ರೆಗೆ ರವಾನಿಸಿದರು. ಸಾವಿಗೆ ನಿಖರ ಕಾರಣ ಹುಡುಕಲು ತನಿಖೆ ಶುರು ಮಾಡಿದ್ದಾರೆ.
ನಟ ಉಪೇಂದ್ರ ಸಂತಾಪ : ಈ ಯುವಕನ ಸಾವಿಗೆ ನಟ ಉಪೇಂದ್ರ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ. ಬದುಕಿ ಬಾಳಬೇಕಾದ ಒಂದು ಅಮೂಲ್ಯ ಜೀವ ಹೀಗೆ ಅತ್ಮಹತ್ಯೆ ಮಾಡಿಕೊಂಡಿರುವುದು ವಿಷಾದನೀಯ. ಈಸಬೇಕು ಇದ್ದು ಜಯಿಸಬೇಕು, ಜೀವನದಲ್ಲಿ ಏನೇ ಕಷ್ಟ ಬಂದರು ಎದುರಿಸಿ ನಿಂತು ಗೆಲ್ಲುವಂತಹ ಛಲ ಯುವಕರಲ್ಲಿ ಇರಬೇಕು.. ಸಂಬಂಧ ಪಟ್ಟವರಿಗೆ ಈ ಸಾವಿನ ದುಃಖವನ್ನು ತಡೆದುಕೊಳ್ಳುವ ಶಕ್ತಿಯನ್ನು ಆ ಭಗವಂತ ಕರುಣಿಸಲಿ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ :ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಡಿಕ್ಕಿ.. ಪಾದಚಾರಿ ಸಾವು..