ಬಾಗೇಪಲ್ಲಿ/ಚಿಕ್ಕಬಳ್ಳಾಪುರ: ಜೂನ್ 12 ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನದ ನಿಮಿತ್ತ ಬಾಗೇಪಲ್ಲಿ ತಾಲೂಕಿನಾದ್ಯಂತ ಜನಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.
ಅಭಿಯಾನಕ್ಕೆ ಬಾಗೇಪಲ್ಲಿ ಸಿವಿಲ್ ಮತ್ತು ಜಿಎಂಎಫ್ಸಿ ನ್ಯಾಯಾಧೀಶರಾದ ಎಸ್.ಎಂ.ಅರುಟಗಿ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಮಕ್ಕಳನ್ನು ದುಡಿಸಿಕೊಳ್ಳುವ ಮಾಲೀಕರಿಗೆ ಅರಿವು ಮೂಡಿಸಬೇಕು ಮತ್ತು ಮಕ್ಕಳನ್ನು ಶಾಲೆಗೆ ಸೇರಿಸಿ ಭವ್ಯ ಭವಿಷ್ಯ ನೀಡಲು ಪಾಲಕರು, ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ಜಾಗೃತಿ ಅಭಿಯಾನ ಅತ್ಯಂತ ಅವಶ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಬಾಲ ಕಾರ್ಮಿಕ ಪದ್ಧತಿ ಒಂದು ಅನಿಷ್ಟ ಪದ್ಧತಿಯಾಗಿ ಪರಿಣಮಿಸಿದ್ದು, ಅನಕ್ಷರತೆ, ಅಜ್ಞಾನ, ಬಡತನದಿಂದ 14 ವರ್ಷದೊಳಗಿನ ಲಕ್ಷಾಂತರ ಮಕ್ಕಳು ಅಲ್ಪಸಂಭಾವನೆಗಾಗಿ ದೇಹ ಸವೆಸುತ್ತಿರುವುದನ್ನು ನೋಡಿದರೆ ಎಂಥಾ ಕಲ್ಲು ಹೃದಯದವರನ್ನು ಕರಗಿಸುತ್ತದೆ. ಆಟ, ಊಟ, ಪಾಠಗಳಲ್ಲಿ ನಕ್ಕು ನಲಿಯಬೇಕಾದ ಮಕ್ಕಳು ಬಾಲಕಾರ್ಮಿಕರಾಗಿದ್ದು, ಇದನ್ನು ತೊಲಗಿಸಿ ಮಕ್ಕಳು ತಮ್ಮ ಬಾಲ್ಯದ ಹಕ್ಕನ್ನು ಪಡೆದುಕೊಳ್ಳುವಂತಾಗಬೇಕು ಎಂದರು.
ಬಾಗೇಪಲ್ಲಿ ತಾಲೂಕು ವಕೀಲರ ಸಂಘದ ಅಧ್ಯಕ್ಷರಾದ ನಂಜುಂಡಪ್ಪ ಮಾತನಾಡಿ, 14 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ. ಕಾನೂನು ಮೀರಿ ಕೆಲಸಕ್ಕೆ ನೇಮಿಸಿಕೊಂಡಲ್ಲಿ 1 ವರ್ಷ ಜೈಲು ಶಿಕ್ಷೆ, 50 ಸಾವಿರ ರೂ.ಗಳವರೆಗೆ ದಂಡ ವಿಧಿಸಲಾಗುತ್ತಿದೆ. ಹಾಗಾಗಿ ಅಭಿಯಾನದ ಮೂಲಕ ತಾಲೂಕುಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.