ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರು ತಾಲೂಕಿನ ವಿದುರಾಶ್ವತ್ಥ ಗ್ರಾಮ ಪುರಾಣ ಪ್ರಸಿದ್ದ ಪುಣ್ಯ ಕ್ಷೇತ್ರದ ಜೊತೆಗೆ ಕರ್ನಾಟಕದ ಜಲಿಯನ್ ವಾಲಾಬಾಗ್ ಅಂತಲೇ ಕರೆಸಿಕೊಳ್ಳುವ ಸ್ವಾತಂತ್ರ್ಯ ಸಂಗ್ರಾಮದ ಹೋರಾಟದ ಸ್ತೂಪ ಇರುವ ಸ್ಥಳ. ವಿದುರಾಶ್ವತ್ಥ ಗ್ರಾಮದಲ್ಲಿ ವೀರಸೌಧದಲ್ಲಿ ಸಂಪೂರ್ಣ ಸ್ವಾತಂತ್ರ್ಯ ಸಂಗ್ರಾಮದ ಚಿತ್ರ ಗ್ಯಾಲರಿ ಮಾಡಲಾಗಿದೆ. ಗ್ಯಾಲರಿಯಲ್ಲಿರುವ ಕೆಲ ಚಿತ್ರಗಳ ಬಗ್ಗೆ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಫೋಟೋ ಬದಲಿಸುವಂತೆ ಆಗ್ರಹ: ಚಿತ್ರ ಗ್ಯಾಲರಿಯಲ್ಲಿನ ಕೆಲ ಫೋಟೋಗಳಲ್ಲಿ ಹಿಂದೂ ಕೋಮುವಾದ, ಬಲ ಪಂಥೀಯ, ಮುಸ್ಲಿಂ ಕೋಮುವಾದ, ಮಹಾತ್ಮ ಗಾಂಧಿ ಹತ್ಯೆ ಮಾಡಿದವರು ಅಂತ ಹಲವು ಫೋಟೋಗಳ ಬಗ್ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿ ಸಂದರ್ಶಕರ ಪುಸ್ತಕದಲ್ಲಿ ತಮ್ಮ ಅಭಿಪ್ರಾಯವನ್ನು ಬರೆದು ಫೋಟೋಗಳ ಬದಲಾವಣೆಗೆ ಆಗ್ರಹಿಸಿದ್ದರು.
ಹೀಗಾಗಿ ಕಳೆದ ೧ ತಿಂಗಳಿಂದ ವೀರಸೌಧದ ಚಿತ್ರ ಗ್ಯಾಲರಿಗೆ ಹಿಂದೂ ಸಂಘಟನೆಗಳ ಕಾರ್ಯಕರ್ತರ ದಾಳಿ ಮಾಡುವ ಆತಂಕ ಎಂದು ಸ್ವತಃ ಉಸ್ತುವಾರಿ ವಹಿಸಿದ್ದ ಸ್ವಾತಂತ್ರ್ಯ ಸ್ಮಾರಕ ಅಭಿವೃದ್ದಿ ಸಮಿತಿ ವತಿಯಿಂದ ವೀರಸೌಧ ಚಿತ್ರ ಗ್ಯಾಲರಿಗೆ ಸೂಕ್ತ ಭದ್ರತೆ ರಕ್ಷಣೆ ನೀಡುವಂತೆ ಪೊಲೀಸ್ ಇಲಾಖೆಗೆ ಮನವಿ ಮಾಡಲಾಗಿದೆ. ಇದರಿಂದಾಗಿ ವೀರಸೌಧದ ಚಿತ್ರ ಗ್ಯಾಲರಿಗೆ ಹಿಂದೆಂದೂ ಕಾಣದ ಪೊಲೀಸರನ್ನು ನಿಯೋಜಿಸಿ ಭದ್ರತೆ ವಹಿಸಲಾಗಿದೆ.
ನಾಳೆ ಬೆಂಗಳೂರಿಂದ ವಿಧುರಾಶ್ವತ್ಥಕ್ಕೆ ಹಿಂದೂಪರ ಸಂಘಟನೆಗಳ ಬೈಕ್ ರ‍್ಯಾಲಿ: ನಾಳೆ ವಿದುರಾಶ್ವತ್ಥ ಗ್ರಾಮಕ್ಕೆ ಸ್ವಾತಂತ್ರ್ಯ ದ ಅಮೃತ ಮಹೋತ್ಸವದ ನಿಮಿತ್ತ ಹಿಂದೂಪರ ಸಂಘಟನೆಗಳು ಬೆಂಗಳೂರಿನ ಪ್ರೀಢಂ ಪಾರ್ಕ್ನಿಂದ ಬೃಹತ್ ಬೈಕ್ ರ‍್ಯಾಲಿಯನ್ನು ಸಹ ಹಮ್ಮಿಕೊಂಡಿದ್ದಾರೆ. ಬಜರಂಗದಳ ಸಂಘಟನೆಯ ರಾಷ್ಟ್ರೀಯ ಸಹ ಸಂಚಾಲಕ ಸೂರ್ಯನಾರಾಯಣ ನೇತೃತ್ವದಲ್ಲಿ ಆಗಮಿಸಲಿರುವ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಹುತಾತ್ಮ ವೀರ ಯೋಧರ ಸ್ಮಾರಕ ಹಾಗೂ ಸ್ತೂಪಕ್ಕೆ ಪುಷ್ಪ ನಮನ ಸಲ್ಲಿಸಲಿದ್ದಾರೆ. ಈ ವೇಳೆ ಚಿತ್ರ ಗ್ಯಾಲರಿಗೆ ಭೇಟಿ ನೀಡುವ ಸಾಧ್ಯತೆ ಇದ್ದು. ವಿವಾದಿತ ಫೋಟೋಗಳ ಮೇಲೆ ದಾಳಿ ನಡೆಯುವ ಆತಂಕವಿದೆ. ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.
ವಿಶ್ವೇಶ್ವರ ಹೆಗಡೆ ಕಾಗೇರಿ ಭೇಟಿ: ಇಂದು ಜಿಲ್ಲಾಡಳಿತದ ವತಿಯಿಂದ ಸ್ವಾತಂತ್ರದ ಅಮೃತ ಮಹೋತ್ಸವದ ನಿಮಿತ್ತ ವಿದುರಾಶ್ವತ್ಥದಲ್ಲಿ ಅಮೃತ ಭಾರತಿಗೆ ಕನ್ನಡದ ಆರತಿ ಕಾರ್ಯಕ್ರಮ ನಡೆಸಲಾಯಿತು. ಸ್ವತಃ ವಿಧಾನಸಭೆ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಚಿತ್ರ ಗ್ಯಾಲರಿಗೆ ಭೇಟಿ ನೀಡಿ ವಿವಾದಿತ ಫೋಟೋಗಳ ವೀಕ್ಷಣೆ ಮಾಡಿದರು. ನಾಳೆ ಸಾವಿರಾರು ಹಿಂದೂ ಪರ ಸಂಘಟನೆ ಕಾರ್ಯಕರ್ತರು ಆಗಮಿಸುವ ಸಾಧ್ಯತೆ ಇದ್ದು ವೀರಸೌಧದ ಚಿತ್ರ ಗ್ಯಾಲರಿಗೆ ಎಲ್ಲಿಲ್ಲದ ಬಂದೋಬಸ್ತ್ ಮಾಡಲಾಗಿದೆ.
ಇದನ್ನೂ ಓದಿ: ರಾಜ್ಯಸಭೆ ಚುನಾವಣೆ: ಬಿಜೆಪಿಯಿಂದ ನಾಲ್ಕನೇ ಅಭ್ಯರ್ಥಿ ಕಣಕ್ಕೆ, ಏನಿದು ತಂತ್ರಗಾರಿಕೆ?