ಚಿಕ್ಕಬಳ್ಳಾಪುರ : ಜಿಲ್ಲೆಯ ಹಲವಾರು ಗ್ರಾಮ ಪಂಚಾಯಿತಿಗಳಲ್ಲಿ ನೀರಿನ ಸಮಸ್ಯೆ ಉಂಟಾಗಿದ್ದು ಇದಕ್ಕೆ ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಸೇರಿದಂತೆ ಪಿ.ಡಿ.ಒ.ಗಳೇ ನೇರ ಕಾರಣ ಎಂದು ತಾಲೂ ಪಂಚಾಯಿತಿಯ ಕೆಲ ಸದಸ್ಯರುಗಳು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಇತ್ತೀಚೆಗೆ ನಡೆದ ಸಾಮಾನ್ಯ ಸಭೆಯಲ್ಲಿ ನೀರಿನ ಸಮಸ್ಯೆಯೇ ಅಧಿಕಾರಿಗಳಿಗೆ ದೊಡ್ಡ ಸಮಸ್ಯೆಯಾಗಿ ಕಾಡಿದೆ. ಬರ ನಿರ್ವಹಣೆಯ ಅಡಿಯಲ್ಲಿ ಕುಡಿಯುವ ನೀರಿನ ಮತ್ತು ದನ ಕರುಗಳ ಮೇವು ಶೇಖರಣೆ ಬಗ್ಗೆ ಇದುವರೆಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಏನೂ ಕ್ರಮ ಕೈಗೊಂಡಿಲ್ಲ ಎಂದು ಪಂಚಾಯತಿ ಸದಸ್ಯರು ಕಿಡಿಕಾರಿದ್ದಾರೆ.
ಹಲವಾರು ಗ್ರಾಮ ಪಂಚಾಯಿತಿಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿದ್ದಾರೆ. ಆದರೆ ಇದನ್ನೆ ಬಂಡವಾಳವನ್ನಾಗಿ ಮಾಡಿಕೊಂಡ ಕೆಲವು ಖಾಸಗಿ ಮುಖಂಡರು ಟ್ಯಾಂಕರ್ಗಳಿಗೆ ಮಿತಿಮೀರಿದ ಹಣವನ್ನು ಪೀಕುತ್ತಿದ್ದು ಇದಕ್ಕೆ ನಾಗರಿಕರು ವಿಧಿ ಇಲ್ಲದೆ ತಲೆಬಾಗುತ್ತಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆ ಬರಪೀಡಿತವಾದರಿಂದ ನೀರು ಹಾಗೂ ಮೇವಿನ ಸಮಸ್ಯೆಯೇ ಭಯಾನಕವಾಗಿ ಕಾಡುತ್ತಿದೆ. ಇದರ ಸಲುವಾಗಿಯೇ ಜನನಾಯಕರು ಸಹ ಸಮಸ್ಯೆಯನ್ನು ಬಗೆಹರಿಸಲು ಸಾಕಷ್ಟು ಶ್ರಮವಹಿಸುತ್ತಿದ್ದಾರೆ. ಸದ್ಯ ಮಳೆಗಾಲ ಆರಂಭವಾದರಿಂದ ನಿರೀಕ್ಷೆಗೆ ತಕ್ಕ ಮಳೆಯೂ ಇಲ್ಲದೆ, ಇತ್ತ ರೈತರಿಗೆ ದಿಕ್ಕು ತೋಚದಂತಾಗಿದೆ.
ಒಟ್ಟಾರೆ ಅಧಿಕಾರಿಗಳು ಬರನಿರ್ವಹಣೆಗೆ ಚರ್ಚೆಯಲ್ಲೇ ಮುಳುಗಿದರೆ ಇತ್ತ ಮಳೆರಾಯನು ಸಹ ಕೈಕೊಡುತ್ತಿದ್ದು ಯಾರು ಕರುಣೆ ತೋರಿಸುತ್ತಾರೋ ಎಂದು ಕಾಯುವ ಸರದಿ ಬಡ ಜನರದಾಗಿದೆ.