ಬಾಗೇಪಲ್ಲಿ: ತಾಲೂಕಿನಾದ್ಯಂತ ಕುಡಿಯುವ ನೀರಿನಲ್ಲಿರುವ ಫ್ಲೋರೈಡ್ ಅಂಶ ಬಗ್ಗೆ ಆತಂಕ ಮುಂದುವರೆದಿದೆ. ಇದರ ಬೆನ್ನಲ್ಲೇ ನೀರಿನಲ್ಲಿ ಹಲವು ಹಳ್ಳಿಗಳಲ್ಲಿ ಯುರೇನಿಯಂ ಪ್ರಮಾಣವೂ ಅಪಾಯದ ಮಟ್ಟ ಮೀರಿ ಇರುವುದು ಪತ್ತೆಯಾಗಿದೆ.
ಡಿವೆಚಾ ಸೆಂಟರ್ ಫಾರ್ ಕ್ಲೈಮೇಟ್ ಚೇಂಜ್, ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್‌ಸಿ) ಹಾಗೂ ಮಂಗಳೂರು ವಿವಿಯ ಸೆಂಟರ್ ಫಾರ್ ಅಡ್ವಾನ್ಸ್‌ಡ್ ರಿಸರ್ಚ್ ಇನ್ ಎನ್ವಿರಾನ್‌ಮೆಂಟಲ್ ರೇಡಿಯೊ ಆ್ಯಕ್ಟಿವಿಟಿ ಸಂಸ್ಥೆಗಳು ನೀರಿನಲ್ಲಿ ಯುರೇನಿಯಂನ ಅಂಶ ಇರುವ ಬಗ್ಗೆ ಅಧ್ಯಯನ ನಡೆಸಿವೆ. ರಾಜ್ಯದ 13 ಜಿಲ್ಲೆಗಳ 73 ಹಳ್ಳಿಗಳಲ್ಲಿ ಕ್ಯಾನ್ಸರ್‌ಕಾರಕ ವಿಷ ಪತ್ತೆ ಆಗಿದೆ. ತಾಲೂಕಿನ ಬಹುತೇಕ ಗ್ರಾಮಗಳು ಯುರೇನಿಯಂ ಕಂಟಕಕ್ಕೆ ಬಲಿಯಾಗುತ್ತಿವೆ.
ಚಿಕ್ಕಬಳ್ಳಾಪುರ ಜಿಲ್ಲೆಯ 7, ಕೋಲಾರ ಜಿಲ್ಲೆಯ 5, ತುಮಕೂರು ಮತ್ತು ಚಿತ್ರದುರ್ಗದ ತಲಾ ಒಂದು ಗ್ರಾಮದಲ್ಲಿ ಒಂದು ಲೀಟರ್ ನೀರಿನಲ್ಲಿ 1 ಸಾವಿರಕ್ಕೂ ಹೆಚ್ಚು ಮೈಕ್ರೋಗ್ರಾಂ ಯುರೇನಿಯಂ ಅಂಶ ಇರುವುದು ಪತ್ತೆಯಾಗಿದ್ದು, ನೀರಿನ ಗುಣಮಟ್ಟದ ಕುರಿತು ಹಲವು ಪ್ರಶ್ನೆಗಳು ಉದ್ಭವವಾಗಿವೆ.
ಸ್ಯಾಂಪಲ್ ತೆಗೆದುಕೊಂಡಿರುವ ಬೋರ್‌ವೆಲ್‌ಗಳ ವ್ಯಾಪ್ತಿಯಲ್ಲಿ ಯಾವುದೇ ಅಣ್ವಸ್ತ್ರ ಕಾರ್ಯ ಚಟುವಟಿಕೆ ಅಥವಾ ನಗರ ಪ್ರದೇಶದಿಂದ ಹೊರ ಹಾಕುವ ತ್ಯಾಜ್ಯದ ನಾಲೆ, ಯಾವುದೇ ಕೈಗಾರಿಕೆಗಳಿಂದ ಹೊರಬರುವ ತ್ಯಾಜ್ಯಗಳು ಇಲ್ಲ. ಆದರೆ, ಯುರೇನಿಯಂ ಅಂಶ ಹೆಚ್ಚಾಗಲು ಮಿತಿ ಮೀರಿದ ಅಂತರ್ಜಲ ಬಳಕೆ ಹಾಗೂ ಗ್ರಾನೈಟ್ ಸೇರಿದಂತೆ ನಾನಾ ಥರದ ಕಲ್ಲುಗಣಿಗಾರಿಕೆಗಳು ಕಾರಣವಾಗಿರಬಹುದು ಎಂದು ಹೇಳಲಾಗಿದೆ.
ಯುರೇನಿಯಂ ಯುಕ್ತ ನೀರಿನ ಸೇವನೆ ದೀರ್ಘಕಾಲಿಕ ರೋಗಗಳಿಗೆ ಕಾರಣವಾಗುತ್ತದೆ. ಆರಂಭದಲ್ಲಿ ಸಣ್ಣ ಪ್ರಮಾಣದ ಜ್ವರ, ತಲೆನೋವು, ವಾಂತಿ ಹೀಗೆ ಸಣ್ಣ ಪುಟ್ಟ ಕಾಯಿಲೆಗಳಿಂದ ಶುರುವಾಗಿ ದೀರ್ಘಕಾಲದಲ್ಲಿ ಮೂಳೆ, ಶ್ವಾಸಕೋಶ ಮತ್ತು ಲಿವರ್ ಕ್ಯಾನ್ಸರ್ ಬರುವ ಸಾಧ್ಯತೆಯೂ ಇದೆ ಎನ್ನುತ್ತಾರೆ ವೈದ್ಯರು.
ಇದನ್ನೂ ಓದಿ: ರಾಜ್ಯದಲ್ಲಿ ಮುದುಡುತ್ತಿರುವ ಕಮಲ: ಬಿಎಸ್ವೈಗೆ ಮತ್ತಷ್ಟು ಪವರ್ ನೀಡಲು ಹೈಕಮಾಂಡ್ ಚಿತ್ತ..?