ಉಡುಪಿ: ಮಹಿಳೆಗೆ ಚುಡಾಯಿಸಿದ ಆರೋಪದಲ್ಲಿ ಬ್ರಹ್ಮಾವರ ಪೊಲೀಸ್ ಠಾಣೆಗೆ ಕರೆ ತಂದಿದ್ದ ಕೇರಳ ಮೂಲದ ಕಾರ್ಮಿಕನೋರ್ವ ಇಂದು ನಸುಕಿನ ವೇಳೆ ಸೆಲ್ನ ಬಾತ್ ರೂಮ್ನೊಳಗೆ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಮೃತನನ್ನು ಕೇರಳ ರಾಜ್ಯದ ಕೊಲ್ಲಂ ಮೂಲದ ಬಿಜು ಮೋಹನ್(42) ಎಂದು ಗುರುತಿಸಲಾಗಿದೆ. ಇವರು ಹಂಗಾರಕಟ್ಟೆ ಮೀನು ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ಮೂರು ದಿನಗಳ ಹಿಂದೆಯಷ್ಟೇ ಇಲ್ಲಿಗೆ ಕೆಲಸಕ್ಕೆ ಸೇರಿಕೊಂಡಿದ್ದರು. ಬಾಡಿಗೆ ಮನೆಯಲ್ಲಿ ವಾಸವಿದ್ದ ಬಿಜು ಮೋಹನ್, ನ.9ರಂದು ರಾತ್ರಿ ವೇಳೆ ಅಲ್ಲೇ ಸಮೀಪದ ಮನೆಯಲ್ಲಿ ವಾಸವಿದ್ದ ಮಹಿಳೆಯನ್ನು ಚುಡಾಯಿಸಿದ್ದರು ಎಂದು ಆರೋಪಿಸಲಾಗಿದೆ.
ಆ ವೇಳೆ ಮಹಿಳೆ ಬೊಬ್ಬೆ ಹಾಕಿದ್ದು, ಸ್ಥಳೀಯರು ಜಮಾಯಿಸಿ ಬಿಜು ಮೋಹನ್ನನ್ನು ಹಿಡಿದು ಮನೆಯೊಳಗೆ ಕೂಡಿ ಹಾಕಿದ್ದರು. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು, ಆರೋಪಿಯನ್ನು ವಶಕ್ಕೆ ಪಡೆದು, ಠಾಣೆಗೆ ಕರೆದೊಯ್ದಿದ್ದರು ಎಂದು ತಿಳಿದುಬಂದಿದೆ.
ಮದ್ಯ ಸೇವಿಸಿದ್ದರೆನ್ನಲಾದ ಬಿಜು ಮೋಹನ್ರನ್ನು ಸೆಲ್ನಲ್ಲಿ ಇರಿಸಲಾಗಿದ್ದು, ಭಾನುವಾರ ನಸುಕಿನ ವೇಳೆ 3.30ರ ಸುಮಾರಿಗೆ ಸಮೀಪದ ಬಾತ್ ರೂಮ್ನಲ್ಲಿ ಕುಸಿದುಬಿದ್ದಿರುವುದು ಕಂಡುಬಂದಿದೆ. ತಕ್ಷಣ ಅವರನ್ನು ಬ್ರಹ್ಮಾವರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಪರೀಕ್ಷಿಸಿದಾಗ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಘಟನೆ ಬಗ್ಗೆ ಮಾಹಿತಿ ನೀಡಿದ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ.ಅರುಣ್ ಕುಮಾರ್ "ಇವತ್ತು ಬೆಳಗ್ಗಿನ ಜಾವ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಒಂದು ಲಾಕಪ್ ಡೆತ್ ಆಗಿದೆ. ನಿನ್ನೆ ಸುಮಾರು 7.45ರ ಹೊತ್ತಿಗೆ ಗ್ರಾಮವೊಂದರ ಮಹಿಳೆ ಹಾಗೂ ಅವರ ಮಕ್ಕಳಿಗೆ ಯಾರೋ ಒಬ್ಬ ವ್ಯಕ್ತಿ ಕಿರುಕುಳ ನೀಡುತ್ತಿರುವುದಾಗಿ ಹೇಳಿ ಕರೆ ಬಂದಿತ್ತು. ತಕ್ಷಣ ಬ್ರಹ್ಮಾವರ ಠಾಣೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದು, ಒಬ್ಬ ವ್ಯಕ್ತಿ ಮಹಿಳೆಗೆ ತೊಂದರೆ ನೀಡುತ್ತಿರುವುದು ಕಂಡು ಬಂದಿದೆ. ತಕ್ಷಣ ವ್ಯಕ್ತಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದಾರೆ. ಅದರ ಬೆನ್ನಲ್ಲೇ ಆ ಮಹಿಳೆ ತಮ್ಮ ಸಹೋದರನೊಂದಿಗೆ ಠಾಣೆಗೆ ಬಂದು ತಮಗೆ ಹಾಗೂ ತಮ್ಮ ಮಕ್ಕಳಿಗೆ ಆ ವ್ಯಕ್ತಿ ಮನೆಯೊಳಗೆ ನುಗ್ಗಿ ಕಿರುಕುಳ ನೀಡಿರುವುದಾಗಿ ದೂರು ನೀಡಿದ್ದಾರೆ. ಅದರ ಆಧಾರದಲ್ಲಿ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ" ಎಂದು ತಿಳಿಸಿದರು.
"ನಂತರ ಆ ವ್ಯಕ್ತಿಯನ್ನು ಲಾಕಪ್ನಲ್ಲಿ ಇಡಲಾಗಿತ್ತು. ನಸುಕಿನ ವೇಳೆ ಸುಮಾರು 3.45ರ ಸುಮಾರಿಗೆ ಠಾಣೆ ಸಿಬ್ಬಂದಿ ನೋಡಿದಾಗ ಆ ವ್ಯಕ್ತಿ ತಲೆಯನ್ನು ಗೋಡೆಗೆ ತಾಗಿಸಿ ಕುಳಿತುಕೊಂಡಿರುವುದು ಕಂಡಿಬಂದಿದೆ. ತಕ್ಷಣ ಸಬ್ ಇನ್ಸ್ಪೆಕ್ಟರ್ ಹಾಗೂ ಆಂಬ್ಯುಲೆನ್ಸ್ಗೆ ಮಾಹಿತಿ ನೀಡಿದ್ದು, ಆತನನ್ನು ಸಮುದಾಯ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಅಲ್ಲಿ ವೈದ್ಯರು ಆತ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಬೆಳಗ್ಗೆ ವ್ಯಕ್ತಿ ಯಾರೆಂದು ಪರಿಶೀಲಿಸಿದಾಗ ಕೇರಳದ ಕೊಲ್ಲಂನ ಬಿಜು ಮೋಹನ್, ಇಲ್ಲಿಗೆ ಕೂಲಿ ಕೆಲಸಕ್ಕಾಗಿ ಬಂದಿರುವುದು ಗೊತ್ತಾಗಿದೆ.
"ವ್ಯಕ್ತಿಯ ಲಾಕಪ್ ಡೆತ್ ಪ್ರಕರಣಕ್ಕೆ ಸಂಬಂಧಿಸಿ ಮೃತರ ಮನೆಯವರಿಗೆ ಮಾಹಿತಿ ನೀಡಲಾಗಿದೆ. ಕೇರಳದಿಂದ ಆಗಮಿಸುತ್ತಿರುವ ಮೃತರ ಕುಟುಂಬಸ್ಥರು ಮುಂದೆ ನೀಡುವ ದೂರನ್ನು ಆಧರಿಸಿ ಕ್ರಮ ಜರುಗಿಸಲಾಗುವುದು. ಇದೊಂದು ಲಾಕಪ್ ಡೆತ್ ಪ್ರಕರಣ ಆಗಿರುವುದರಿಂದ ಇದರ ತನಿಖೆಯನ್ನು ಸಿಐಡಿ ವಹಿಸಿಕೊಳ್ಳಲಿದೆ. ಮರಣೋತ್ತರ ಪರೀಕ್ಷೆಯನ್ನು ಎರಡು ತಂಡಗಳು ನೆರವೇರಿಸಲಿದ್ದು, ಅದರ ಸಂಪೂರ್ಣ ವಿಡಿಯೋ ಚಿತ್ರೀಕರಣ ಮಾಡಲಾಗುವುದು. ನ್ಯಾಯಾಧೀಶರ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಯಲಿದೆ" ಎಂದು ಎಸ್ಪಿ ವಿವರಿಸಿದರು.
ಇದನ್ನೂ ಓದಿ: ಪಾಠ ಮಾಡುವಾಗ ಕುಸಿದುಬಿದ್ದ ಶಿಕ್ಷಕ; ವಿದ್ಯಾರ್ಥಿಗಳ ಕಣ್ಣೆದುರೇ ಹೃದಯಸ್ತಂಭನದಿಂದ ಗುರುವಿನ ಸಾವು