ಚಿಕ್ಕಬಳ್ಳಾಪುರ: ರಾಜ್ಯ ಲೋಕಸಭಾ ಚುನಾವಣೆಯಲ್ಲಿ ಜೋಡೆತ್ತುಗಳ ಸದ್ದು ಹೆಚ್ಚಾಗುತ್ತಿದೆ. ಕೋಲಾರ ಲೋಕಸಭಾ ಚುನಾವಣೆಯಲ್ಲಿ ಕಮಲದ ಪರ ಜೋಡೆತ್ತುಗಳು ಸಾಕಷ್ಟು ಶ್ರಮವಹಿಸುತ್ತಿವೆ ಎಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಚಿಂತಾಮಣಿ ನಗರದಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ತಿಳಿಸಿದ್ದಾರೆ.
ಕೋಲಾರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮುನಿಯಪ್ಪ ಸಾಧನೆ ಶೂನ್ಯವಾಗಿದ್ದು, ತನ್ನ ಬೆಂಬಲಿಗರಿಗೆ ಹಾಗೂ ಮಗಳಿಗೆ ಮಾತ್ರ ಅನುಕೂಲ ಮಾಡಿಕೊಟ್ಟಿದ್ದಾರೆ. ಸದ್ಯ ಈ ಬಾರಿ ಮುನಿಯಪ್ಪರನ್ನು ಮನೆಗೆ ಕಳುಹಿಸಲು ಸ್ಥಳೀಯ ಮಾಜಿ ಶಾಸಕ ಸುಧಾಕರ್ ಹಾಗೂ ಕೊತ್ತೂರು ಮಂಜುನಾಥ್ ಇಬ್ಬರು ಜೋಡೆತ್ತುಗಳು ಸಾಕಷ್ಟು ಶ್ರಮವಹಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.
ಈ ಬಾರಿ ಮೋದಿಯ ಅಲೆಯಲ್ಲಿ ಕೆ.ಹೆಚ್ ಮುನಿಯಪ್ಪ ಮನೆಗೆ ಹೋಗುವುದು ಗ್ಯಾರೆಂಟಿ. ಕೋಲಾರ ಕ್ಷೇತ್ರ ವ್ಯಾಪ್ತಿಯಲ್ಲಿ ಕಳೆದ 7 ಬಾರಿ ಗೆದ್ದರೂ, ಕೋಲಾರ ಮಾತ್ರ ಬರಡು ಭೂಮಿಯಾಗಿದೆಯೇ ಹೊರತು ಯಾವೊಂದು ಅಭಿವೃದ್ಧಿಯೂ ಆಗಿಲ್ಲ ಎಂದು ಕಿಡಿಕಾರಿದರು.
ಕಳೆದ ಬಾರಿ ಮುನಿಯಪ್ಪ ಹಾಗೂ ದೇವೆಗೌಡರು ಒಳಒಪ್ಪಂದ ಮಾಡಿಕೊಂಡು ಅಧಿಕಾರ ಚಲಾಯಿಸುತ್ತಿದ್ದರು. ಆದರೆ ಈಗ ನೇರ ಹಣಾಹಣಿ ಇದ್ದು ಬಿಜೆಪಿ ನೂರಕ್ಕೆ ನೂರರಷ್ಟು ಗೆಲ್ಲುತ್ತದೆ ಎಂದು ತಿಳಿಸಿದರು.