ಚಿಕ್ಕಬಳ್ಳಾಪುರ : ದಕ್ಷಿಣ ಭಾರತದ ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದೆ.
ಬಿಪಿಎಲ್ ಕಾರ್ಡ್ ಹೊಂದಿರುವ ರಾಜ್ಯದ 1.5 ಕೋಟಿ ಜನರಿಗೆ ಜನತಾ ಕರ್ಫ್ಯೂ ಅವಧಿ ಒಳಗೊಂಡಂತೆ ಮುಂದಿನ 3 ತಿಂಗಳವರೆಗೆ ಪ್ರತಿ ತಿಂಗಳು ಕನಿಷ್ಠ 3000 ಸಾವಿರ ರೂ. ಜೀವನೋಪಾಯಕ್ಕೆ ನೀಡಲು ಕ್ರಮವಹಿಸಬೇಕೆಂದು ಸಂಸದ ಬಿ.ಎನ್.ಬಚ್ಚೇಗೌಡ ಸರ್ಕಾರಕ್ಕೆ ಮನವಿ ಮಾಡಿದರು.
ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಜನತಾ ಕರ್ಫ್ಯೂ ಇರುವುದರಿಂದ ಎಷ್ಟೋ ಕಾರ್ಮಿಕರಿಗೆ ಕೆಲಸವಿಲ್ಲ. ನಿರುದ್ಯೋಗ ಮತ್ತು ಬಡತನ ಜಾಸ್ತಿಯಾಗಿದೆ. ಆದ್ದರಿಂದ ಇಂದಿರಾ ಕ್ಯಾಂಟೀನ್ ಮುಂದುವರಿಸಿ ಜನರಿಗೆ ಆಹಾರದ ಪೊಟ್ಟಣ ನೀಡಬೇಕು.
ಜಿಲ್ಲೆಯಲ್ಲಿ ಕೋವಿಡ್ ಸೋಂಕು ಹರಡದಂತೆ ತಡೆಯುವ ಕ್ರಮಗಳ ಉಪಯೋಗಕ್ಕಾಗಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದರ ಪ್ರದೇಶಾಭಿವೃದ್ಧಿ ಅನುದಾನದಡಿ 25 ಲಕ್ಷಗಳನ್ನು ಬಳಸಿಕೊಳ್ಳುವಂತೆ ಲಿಖಿತ ಮನವಿಯನ್ನು ಅಪರ ಜಿಲ್ಲಾಧಿಕಾರಿಗಳಿಗೆ ನೀಡಿದರು.
ಕೋವಿಡ್ ಮೂರನೇ ಅಲೆ ಬಂದೆ ಬರುತ್ತೆ ಎಂದು ಈಗಾಗಲೇ ತಜ್ಞರು ಹೇಳಿದ್ದಾರೆ. ಆದ್ದರಿಂದ ಮೂರನೇ ಅಲೆಯನ್ನು ಸಮರ್ಪಕವಾಗಿ ಎದುರಿಸಲು ಸರ್ಕಾರ ಈಗಿನಿಂದಲೇ ಸಕಲ ಸಿದ್ದತೆ ಮಾಡಿಕೋಳ್ಳಬೇಕು.
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರ ತಂಡದ ಮಂತ್ರಿಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು. ಕೋವಿಡ್ ನಿಯಂತ್ರಣ ಸಂಬಂಧ ರಚಿಸಿರುವ ರಾಜ್ಯಮಟ್ಟದ ಟಾಸ್ಕ್ಪೊರ್ಸ್ ಸಮಿತಿಯಲ್ಲಿರುವ ಎಲ್ಲರೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿ ಕೋವಿಡ್ ಪಿಡುಗನ್ನು ತೊಲಗಿಸಬೇಕು ಎಂದರು.
ಚಿಕ್ಕಬಳ್ಳಾಪುರ ಮಾದರಿ ಜಿಲ್ಲೆ: ನಗರ ಪ್ರದೇಶಗಳಲ್ಲಿ ಪ್ರತಿ ವಾರ್ಡ್ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಪ್ರತಿ ಗ್ರಾಮಕ್ಕೆ ಒಂದು ಟಾಸ್ಕ್ ಫೋರ್ಸ್ ಸಮಿತಿ ಮಾಡಿ ಪ್ರತಿ ಗ್ರಾಮಕ್ಕೆ ಒಬ್ಬರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ.
ಟಾಸ್ಕ್ ಫೋರ್ಸ್ ಸಮಿತಿಯು ಯೋಜನೆ ರೂಪಿಸಿಕೊಂಡು ತಲಾ ವಾರು ತಮ್ಮ ವ್ಯಾಪ್ತಿಯ ಮನೆಗಳನ್ನು ಹಂಚಿಕೊಂಡು ಪ್ರತಿ ಮನೆ ಮನೆಗೆ ಭೇಟಿ ನೀಡಿ ಆರೋಗ್ಯ ಸೇವೆ ಹಾಗೂ ಮಾಹಿತಿ ಒದಗಿಸುತ್ತಿದ್ದಾರೆ.
ದಾಖಲಾಗಿರುವ ಕೋವಿಡ್ ಪ್ರಕರಣಗಳು ಎಷ್ಟು, ಸಕ್ರಿಯ ಪ್ರಕರಣಗಳು ಎಷ್ಟು ಎಂಬ ಮಾಹಿತಿಯನ್ನು ಪಡೆಯುತ್ತಿದ್ದಾರೆ. ಕೋವಿಡ್ ಸೋಂಕು ತಗುಲಿದವರ ಸಂಪರ್ಕಕ್ಕೆ ಬಂದವರನ್ನು ಪತ್ತೆಹಚ್ಚಿ ಹೋಮ್ ಕ್ವಾರಂಟೈನ್ ಇರುವಂತೆ ನೋಡಿಕೊಳ್ಳುತ್ತಿದ್ದಾರೆ. ಈ ಎಲ್ಲಾ ಕ್ರಮಗಳ ಹಿನ್ನಲೆ ಕೋವಿಡ್ ನಿಯಂತ್ರಣದಲ್ಲಿ ರಾಜ್ಯದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ 5ನೇ ಸ್ಥಾನದಲ್ಲಿದೆ ಎಂದರು.