ಚಿಕ್ಕಬಳ್ಳಾಪುರ: ಗುಡಿಬಂಡೆ ತಾಲೂಕಿನಲ್ಲಿ ಕಳೆದ ರಾತ್ರಿ ಸುರಿದ ಭಾರಿ ಮಳೆಯಿಂದ ಕೋಳಿ ಫಾರಂಗೆ ನೀರು ನುಗ್ಗಿದ ಪರಿಣಾಮ ಸಾವಿರಾರು ಕೋಳಿಗಳು ಸಾವನ್ನಪ್ಪಿರುವ ಘಟನೆ ಹಂಪಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳೇಯರ್ರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಹಳೇಯರ್ರಹಳ್ಳಿ ಗ್ರಾಮದ ರೈತ ವೆಂಕಟರೆಡ್ಡಿ ಎಂಬುವವರಿಗೆ ಸೇರಿದ ಕೋಳಿ ಫಾರಂನಲ್ಲಿ ಪ್ರತ್ಯೇಕ ಶೆಡ್ಡುಗಳಲ್ಲಿ 10 ಸಾವಿರಕ್ಕೂ ಹೆಚ್ಚು ಕೋಳಿಗಳನ್ನು ಸಾಕಣೆ ಮಾಡಲಾಗುತ್ತಿತ್ತು. ಕಳೆದ ರಾತ್ರಿ ಸುರಿದ ಮಳೆಯಿಂದ ಫಾರಂಗೆ ನೀರು ನುಗ್ಗಿ 1,500 ಕ್ಕೂ ಅಧಿಕ ಕೋಳಿಗಳು ಸಾವನ್ನಪ್ಪಿವೆ. ಅಲ್ಲದೇ, ಅದೇ ಶೆಡ್ಡಿನಲ್ಲಿದ್ದ 40 ಸಾವಿರಕ್ಕೂ ಅಧಿಕ ಮೌಲ್ಯದ ಕೋಳಿ ಆಹಾರ ಹಾಳಾಗಿವೆ. ಶೆಡ್ಡಿಗೂ ಅಲ್ಪ ಪ್ರಮಾಣದ ಹಾನಿಯಾಗಿದ್ದು, ಒಟ್ಟಾರೆ ಒಂದು ಲಕ್ಷ ರೂ.ನಷ್ಟು ನಷ್ಟವಾಗಿದ್ದು, ಇದರಿಂದ ಕೋಳಿ ಸಾಕಣೆಯನ್ನೇ ನಂಬಿಕೊಂಡಿದ್ದ ರೈತ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇನ್ನು 15-20 ದಿನ ಕಳೆದಿದ್ದರೇ ಸಾವಿರಾರು ರೂಪಾಯಿ ಆದಾಯ ಬರುತ್ತಿತ್ತು. ವರುಣನ ಆರ್ಭಟದಿಂದ ಈಗ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದ್ದು, ಜಿಲ್ಲಾಡಳಿತ ಪ್ರಕೃತಿ ವಿಕೋಪ ನಿಧಿ ಅಡಿ ಪರಿಹಾರ ನೀಡಬೇಕೆಂದು ರೈತ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ತಗ್ಗಿದ ಮಳೆಯ ಪ್ರಮಾಣ: ರೈನ್ ಬೋ ಲೇಔಟ್ ಸೇರಿದಂತೆ ಹಲವು ಬಡಾವಣೆಗಳು ಯಥಾಸ್ಥಿತಿಯತ್ತ