ಚಿಕ್ಕಬಳ್ಳಾಪುರ : ಅಕ್ರಮವಾಗಿ ಕಟ್ಟಿ ಹಾಕಲಾಗಿದ್ದ ದನಕರುಗಳನ್ನು ರಕ್ಷಿಸಲು ಹೋದ ಪೊಲೀಸರ ಮೇಲೆಯೇ ಸ್ಥಳೀಯರು ಕಲ್ಲು ತೂರಾಟ ನಡೆಸಿದ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಅಲೀಪುರ ಗ್ರಾಮದಲ್ಲಿ ನಡೆದಿದೆ. 30ಕ್ಕೂ ಹೆಚ್ಚು ದನಕರುಗಳನ್ನು ಅಕ್ರಮವಾಗಿ ಕೂಡಿ ಹಾಕಿದ್ದ ಖಚಿತ ಮಾಹಿತಿ ತಿಳಿದ ಗೋವ್ ಗಾನ್ ಫೌಂಡೇಷನ್ ಮಂಚ್ಚೇನಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ.
ಮಾಹಿತಿ ನೀಡುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಗೋವುಗಳ ರಕ್ಷಣೆಗೆ ಮುಂದಾದ ವೇಳೆ ಅಲ್ಲಿನ ಸ್ಥಳೀಯರು ತೀರ್ವ ವಿರೋಧ ವ್ಯಕ್ತಪಡಿಸಿದರು. ಪೊಲೀಸರ ಮೇಲೆಯೇ ಕಲ್ಲು ತೂರಾಟ ನಡೆಸಲು ಮುಂದಾಗಿದ್ದಾರೆ. ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮಾಹಿತಿ ತಿಳಿಸಿ ಹೆಚ್ಚುವರಿ ಪೊಲೀಸರನ್ನು ನಿಯೋಜನೆಗೊಳಿಸಿ ಗೋವುಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದೇ ವೇಳೆ ನೂರಾರು ಸ್ಥಳೀಯರು ಜಮಾಯಿಸಿ ಪೊಲೀಸರಿಗೆ ಅಡ್ಡಿಪಡಿಸಿದರು. ಆದರೆ, ಪೊಲೀಸ್ ಅಧಿಕಾರಿಗಳು ಕಾನೂನಿನ ಅರಿವು ಮೂಡಿಸಿ ಗೋವುಗಳ ರಕ್ಷಣೆಗೆ ಮುಂದಾಗಿದ್ದಾರೆ. ಘಟನೆ ವೇಳೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಇನ್ನೂ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ: ಕೊಳ್ಳೇಗಾಲ : ಮನೆಯ ಹಿಂಬಾಗಿಲು ಹೊಡೆದು 42 ಗ್ರಾಂ. ಚಿನ್ನಾಭರಣ ಕಳವು