ಗೌರಿಬಿದನೂರು: ಮಚ್ಚಿನಿಂದ ದಾಳಿಗೊಳಗಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಗಂಭೀರವಾಗಿ ಗಾಯಗೊಂಡ ಯುವಕನನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟ ಘಟನೆ ತಾಲೂಕಿನ ಚಿಕ್ಕಕುರುಡುಗೋಡು ಬಳಿ ನಡೆದಿದೆ.
ಮೃತ ವ್ಯಕ್ತಿಯನ್ನು ದೊಡ್ಡಬಳ್ಳಾಪುರ ತಾಲೂಕಿನ ಕುರುಬರಹಳ್ಳಿ ನಿವಾಸಿ ಮಂಜುನಾಥ್(27) ಎಂದು ಗುರುತಿಸಲಾಗಿದೆ. ಯುವಕನನ್ನು ಕೊಲೆ ಮಾಡುವ ಉದ್ದೇಶದಿಂದ ಮಚ್ಚಿನಿಂದ ದಾಳಿ ಮಾಡಿರುವ ಶಂಕೆಯನ್ನು ವ್ಯಕ್ತಪಡಿಸಲಾಗುತ್ತಿದ್ದು, ಚಿಕ್ಕಕುರುಡುಗೋಡು ರಸ್ತೆಯಲ್ಲಿ ಹೋಗುತ್ತಿದ್ದ ಸಾರ್ವಜನಿಕರು ಹಲ್ಲೆಗೊಳಗಾಗಿ ಉಸಿರಾಡುತ್ತಿದ್ದ ಯುವಕನನ್ನು ಗಮನಿಸಿ ಆ್ಯಂಬುಲೆನ್ಸ್ ಮೂಲಕ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸುವ ವೇಳೆ ಯುವಕ ಮೃತಪಟ್ಟಿದ್ದಾನೆ.
ಯುವಕನನ್ನು ಮಚ್ಚಿನಿಂದ ಕೊಚ್ಚಿ ರಸ್ತೆ ಬದಿ ಬಿಸಾಡಿದ್ದಾರಾ ಅಥವಾ ಅಪಘಾತ ನಡೆದು ಯುವಕ ಮೃತ ಪಟ್ಟಿದ್ದಾನಾ ಎಂಬುದು ನಿಖರವಾಗಿ ತಿಳಿದು ಬಂದಿಲ್ಲ.
ಸ್ಥಳಕ್ಕೆ ಸರ್ಕಲ್ ಇನ್ಸಪೆಕ್ಟರ್ ರವಿ ಹಾಗೂ ಪಿಎಸ್ಐ ಮೋಹನ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.