ಚಿಕ್ಕಬಳ್ಳಾಪುರ: ಬೆಂಗಳೂರಿನ ಆನೇಕಲ್ ತಿಮ್ಮಯ್ಯ ಚಾರಿಟೇಬಲ್ ಟ್ರಸ್ಟ್‌ನಲ್ಲಿರುವ ದತ್ತಿ ಆಸ್ತಿಯನ್ನ ಕಾನೂನು ಬಾಹಿರವಾಗಿ ಆಕ್ರಮಿಸಿಕೊಂಡಿದ್ದಾರೆಂದು ಆರೋಪಿಸಿ ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡ ವಿರುದ್ಧ ಜಿಲ್ಲೆಯ ಚಿಂತಾಮಣಿ ನಗರದ ತಾಲೂಕು ಕಚೇರಿ ಮುಂದೆ ಬಲಿಜ ಜನಾಂಗದ ಮುಖಂಡರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ್ದಾರೆ.
2019-20 ಸಾಲಿನಲ್ಲಿ ಸುಮಾರು 240 ವಿದ್ಯಾರ್ಥಿಗಳು ವ್ಯಾಸಾಂಗ ಮಾಡುವ ವೇಳೆ ದತ್ತಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪದಾಧಿಕಾರಿಗಳೊಂದಿಗೆ ಶಾಮೀಲಾಗಿ ಟ್ರಸ್ಟಿನ ಕಟ್ಟಡವನ್ನು ಅಕ್ರಮವಾಗಿ ಬಾಡಿಗೆ ಪಡೆದು, ಟ್ರಸ್ಟ್‌ನ ನೀತಿ-ನಿಯಮಗಳನ್ನು ಉಲ್ಲಂಘಿಸಿ ಲೀಜ್ ಅಗ್ರಿಮೆಂಟ್ ಪ್ರಕಾರವೇ ₹7.5 ಕೋಟಿ ಬಾಡಿಗೆ ಹಣ ದುರುಪಯೋಗ ಮಾಡಿಕೊಂಡು ಬಲಿಜ ಸಮಾಜಕ್ಕೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದ್ದಾರೆ.
ಜನಪ್ರತಿನಿಧಿಗಳು, ರಾಜಕೀಯ ಮುಖಂಡರ ಕೆಲಸ ಅಭಿವೃದ್ಧಿ ಮಾಡುವುದು. ಆದರೆ, ಶಿವರಾಮೇಗೌಡರು ನೀಚ ಕೆಲಸ ಮಾಡಿ ವಿದ್ಯಾರ್ಥಿಗಳ ರಕ್ತ ಹೀರುತ್ತಿದ್ದಾರೆ. ಜನ ನಾಯಕರು ಜನರ ಅಭಿವೃದ್ದಿಗೆ ಶ್ರಮಿಸಬೇಕು. ಆದರೆ, ಇವರು ಹಣ ಲಪಟಾಯಿಸಿ ರಕ್ತ ಹೀರುತ್ತಿದ್ದಾರೆ. ಇದರ ಸಲುವಾಗಿಯೇ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಜೆಡಿಎಸ್ ಪಕ್ಷದ ನಾಯಕರಾದ ಕುಮಾರಸ್ವಾಮಿ ಹಾಗೂ ದೇವೇಗೌಡರಿಗೂ ಮಾಹಿತಿ ತಿಳಿಸಲಾಗಿದೆ. ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದ್ದಾರೆ. ಆದರೂ ಯಾವುದೇ ಪ್ರಯೋಜನವಿಲ್ಲದಿದ್ರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ಕೊಟ್ಟಿದ್ದಾರೆ.