ಚಿಕ್ಕಬಳ್ಳಾಪುರ: ಬೇಸಿಗೆ ಆರಂಭವಾಗುತ್ತಿದಂತೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಅಭಾವ ಉಂಟಾಗಿದ್ದು, ಇಂದು ನಡೆದ ಕೆಡಿಪಿ ಸಭೆಯಲ್ಲಿ ಗ್ರಾಮಗಳಿಗೆ ಸಮರ್ಪಕ ನೀರನ್ನು ಒದಗಿಸದಿದ್ದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ಅಧಿಕಾರಿಗಳಿಗೆ ಸೂಚಿಸಿದರು.
ಸರ್ಕಾರವೇ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಣೆ ಮಾಡಿದ್ದು, ಈಗ ಬೇಸಿಗೆ ಆರಂಭವಾಗುತ್ತಿದಂತೆ ಕುಡಿಯುವ ನೀರಿಗೆ ಅಭಾವ ಸೃಷ್ಟಿಯಾಗಿದೆ. ಜಿಲ್ಲೆಗೆ ಕೋಟ್ಯಾಂತರ ರೂ. ವಹಿವಾಟು ತಂದು ಕೊಡುತ್ತಿರುವ ಚಿಂತಾಮಣಿ ತಾಲೂಕಿನ ಸುಮಾರು 36 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದೆ. ಸದ್ಯಕ್ಕೆ 11 ಗ್ರಾಮಗಳಲ್ಲಿ ಟ್ಯಾಂಕರ್‌ಗಳ ಮುಖಾಂತರ ನೀರನ್ನು ಸರಬರಾಜು ಮಾಡಲಾಗುತ್ತಿದ್ದು, 25 ಗ್ರಾಮಗಳಿಗೆ ಖಾಸಗಿ ಕೊಳವೆ ಬಾವಿಗಳ ಮುಖಾಂತರ ನೀರನ್ನು ಸರಬರಾಜು ಮಾಡಲಾಗುತ್ತಿದೆ.
ಈ ಕುರಿತು ಮಾತನಾಡಿದ ಜಿಲ್ಲಾ ಪಂಚಾಯತ್ ಅಧ್ಯಕ್ಷ ಚಿಕ್ಕನರಸಿಂಹಯ್ಯ, ಅಧಿಕಾರಿಗಳಿಗೆ ಸಮರ್ಕಪಕವಾಗಿ ನೀರನ್ನು ಒದಗಿಸುವಂತೆ ಸೂಚಿಸಿದರು. ಇದೇ ತಿಂಗಳ 15 -16 ರಂದು ಸಿರಿಧಾನ್ಯಗಳ ಹಬ್ಬ ಮತ್ತು ಫಲಪುಷ್ಪ ಪ್ರದರ್ಶನವನ್ನು ಆಯೋಜನೆ ಮಾಡಲಾಗುತ್ತಿದ್ದು, ಎಲ್ಲಾ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗುವುದರ ಜೊತೆಗೆ ರೈತರನ್ನು ಕರೆ ತರುವಂತೆ ಆದೇಶಿಸಿದರು.
ಕೃಷಿ ಹೊಂಡದಲ್ಲಿ ಮೀನು ಸಾಕಾಣಿಕೆ ಯೋಜನೆಯಡಿ ಸರ್ಕಾರದಿಂದ 5,000 ಹಣವನ್ನು ಪ್ರೋತ್ಸಹ ಧನವನ್ನಾಗಿ ನೀಡಲಾಗುತ್ತಿದೆ. ಆದರೆ ಸಾಕಷ್ಟು ರೈತರಿಗೆ ಈ ಯೋಜನೆಯ ಬಗ್ಗೆ ಮಾಹಿತಿ ಇಲ್ಲ. ಜಿಲ್ಲೆಯಲ್ಲಿ ನೂರಾರು ಕೃಷಿ ಹೊಂಡಗಳಿದ್ದು ಮೀನುಗಾರಿಕೆ ಯೋಜನೆಯಡಿ ಸಿಗುವ ಪ್ರೋತ್ಸಾಹ ಧನದ ಬಗ್ಗೆ ಮಾಹಿತಿ ನೀಡಿ ಎಂದು ತಿಳಿಸಿದರು. ಸದ್ಯಕ್ಕೆ ಕೃಷಿ ಹೊಂಡ ನಿರ್ಮಿಸಿಕೊಂಡಿರುವ ರೈತರು ಮೀನುಗಾರಿಕೆ ಯೋಜನೆಯಡಿ ಪ್ರೋತ್ಸಹ ಧನವನ್ನು ಪಡೆಯಬಹುದು ಎಂದು ಮೀನುಗಾರಿಕೆ ಇಲಾಖೆ ಸ್ಪಷ್ಟಪಡಿಸಿದ್ದು, ಅರ್ಹ ರೈತರು ಇದನ್ನು ಸದ್ಬಳಕೆ ಮಾಡಿಕೊಳ್ಳಬಹುದು.