ಚಿಕ್ಕಬಳ್ಳಾಪುರ : ಚಿಂತಾಮಣಿ ನಗರದಲ್ಲಿ ಇಬ್ಬರು ಕೊರೊನಾ ಸೊಂಕಿತರು ಪತ್ತೆಯಾದ ಹಿನ್ನೆಲೆ ನಗರಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಭೇಟಿ ನೀಡಿ ಸಾರ್ವಜನಿಕರಿಗೆ ಅಗತ್ಯ ಸಲಹೆಗಳನ್ನು ನೀಡಿದ್ದಾರೆ.
ನಗರದಲ್ಲಿ 71 ವರ್ಷದ ವ್ಯಕ್ತಿ ಮತ್ತು ಅದೇ ಕುಟುಂಬದ 22 ವರ್ಷದ ಇನ್ನೊಬ್ಬ ವ್ಯಕ್ತಿಗೆ ಕೋವಿಡ್-19 ದೃಢಪಟ್ಟಿರುವ ಕಾರಣ ವಾರ್ಡ್ ನಂಬರ್ 9, 10 ಮತ್ತು11 ನೇ ವಾರ್ಡ್ ಸೀಲ್ ಡೌನ್ ಮಾಡಲಾಗಿದೆ. ಇದರಿಂದ ಜನರು ಭಯಪಡುವ ಅವಶ್ಯಕತೆ ಇಲ್ಲ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲಾಗಿದೆ ಎಂದು ತಿಳಿಸಿದರು.
ನಗರದ ಡಿವೈಸ್ಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಗರದ ಬಟ್ಟೆ, ಶಾಪಿಂಗ್ ಸೆಂಟರ್, ಚಿನ್ನದ ಅಂಗಡಿಗಳನ್ನು ಯಾವುದೇ ಕಾರಣಕ್ಕೂ ತೆಗೆಯಬಾರದು. ಇನ್ನು, ದಿನಸಿ ಪದಾರ್ಥಗಳು ಮತ್ತು ಇತರೆ ಅಂಗಡಿಗಳು ತೆಗೆಯಲು ಬೆಳಗ್ಗೆ 11 ಗಂಟೆಯವರೆಗೂ ಅವಕಾಶ ಮಾಡಿಕೊಡಲಾಗಿದೆ. ಜನರು ಮಾಸ್ಕ್ ಕಡ್ಡಾಯವಾಗಿ ಧರಿಸಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು ಎಂದರು.
ಕೊರೊನಾ ಪ್ರಕರಣ ದೃಢಪಟ್ಟಿರುವ ವ್ಯಕ್ತಿಗಳ ಸಂಪರ್ಕದಲ್ಲಿದ್ದ ಹಲವಾರು ಮಂದಿಯನ್ನು ಈಗಾಗಲೇ ಕ್ವಾರಂಟೈನ್ ಮಾಡಲಾಗಿದೆ. ಜನರು ರಸ್ತೆಗಳಲ್ಲಿ ಗುಂಪು ಗುಂಪಾಗಿ ಸೇರಿದರೆ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.ಇದೇ ವೇಳೆ ಉಪ ವಿಭಾಗದ ಅಧಿಕಾರಿಗಳಾದ ರಘನಂದನ್ ಇದ್ದರು.