ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ತಾಲೂಕಿನ ಮೇಲೂರು ಗ್ರಾಮದ ಜೆಡಿಎಸ್ ಮುಖಂಡ ರವಿ ಎಂಬುವರ ಪುತ್ರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಲಹರಿ (21) ಮೃತ ದುರ್ದೈವಿ ಎಂದು ತಿಳಿದು ಬಂದಿದೆ.
![girl suicide](https://etvbharatimages.akamaized.net/etvbharat/prod-images/12651113_thumbjpg.jpg)
ಲಹರಿ ವೈದ್ಯಕೀಯ ವಿದ್ಯಾರ್ಥಿಯಾಗಿದ್ದು, ವಿದ್ಯಾಭ್ಯಾಸದಲ್ಲಿನ ಒತ್ತಡ ತಾಳಲಾರದೆ ಕಳೆದ ನಾಲ್ಕು ದಿನಗಳ ಹಿಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ತಕ್ಷಣ ಪೋಷಕರು, ಯುವತಿಯನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಯುವತಿ ಭಾನುವಾರ ಮೃತಪಟ್ಟಿದ್ದಾಳೆ. ಇಂದು ಆಕೆಯ ಅಂತ್ಯಸಾಂಸ್ಕರ ನೆರವೇರಿಸಲಾಯಿತು.
ಈ ಸಂಬಂಧ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಲಾಕ್ಡೌನ್ನಿಂದ ನಷ್ಟ: ಯುವಕ ಆತ್ಮಹತ್ಯೆ
ಚಿಕ್ಕಬಳ್ಳಾಪುರ ನಗರದ ಕಾರ್ಖಾನೆ ಪೇಟೆಯಲ್ಲಿ ಯುವಕನೋರ್ವ ಬಟ್ಟೆ ಅಂಗಡಿ ನಡೆಸುತ್ತಿದ್ದನು. ಆದರೆ ಲಾಕ್ಡೌನ್ನಿಂದ ನಷ್ಟ ಸಂಭವಿಸಿತ್ತು. ಇದಿರಂದ ನೊಂದ ಯುವಕ ಆತ್ಮಹತ್ಯೆಗೆ ಯತ್ನಿಸಿದ್ದನು. ಕೂಡಲೇ ಈತನನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ಈ ಸಂಬಂಧ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.